ಸಂಚಾರ ಸಿಕ್ಕು ಕಡಿಮೆ ಮಾಡಲಿದೆ ಬೈಪಾಸ್

21 KKNR 22 01
ಕುಕನೂರಿನಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ ಕೆ.ರಾಜಶೇಖರ್ ಹಿಟ್ನಾಳ ಭೂಮಿ ಪೂಜೆ ನೆರವೇರಿಸಿದರು. ಶಾಸಕರಾದ ಬಸವರಾಜ ರಾಯರಡ್ಡಿ, ಮಾಜಿ ಜಿಪಂ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಪಪಂ ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಇದ್ದರು.
Published on

ಕುಕನೂರು:ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಾಲೂಕಿಗೆ ಯೋಜನೆಗಳನ್ನು ತರುವ ಮೂಲಕ ಸ್ಥಳೀಯ ಶಾಸಕರು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಸಂಸದ ಕೆ.ರಾಜಶೇಖರ್ ಹಿಟ್ನಾಳ ಹೇಳಿದರು.

ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ-367ರ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡ ಪಟ್ಟಣಗಳಿಗೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಕ್ಷೇತ್ರದ ಅಭಿವೃದ್ಧಿಗೆ ದೂರ ದೃಷ್ಟಿ ಹೊಂದಿದ್ದು, ಕಳೆದ 4 ದಶಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಯಲಬುರ್ಗಾ ತಾಲೂಕು ಶೇ.90 ಮಳೆ ಆಧಾರಿತ ಪ್ರದೇಶವಾಗಿದ್ದು, ನೀರಾವರಿ ಸೌಲಭ್ಯಕ್ಕೆ ಶಾಸಕರು ಹೆಚ್ಚು ಒತ್ತು ನೀಡುವ ಮೂಲಕ ಕೆರೆ ತುಂಬಿಸುವ ಯೋಜನೆ, ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ಮೂಲಕ ಆರ್ಥಿಕ ಸಬಲೀಕರಣಗೊಳಿಸುವ ಕೆಲಸ ಮಾಡಿದ್ದಾರೆ. ಸಣ್ಣ ಪುಟ್ಟ ಹಳ್ಳಿಯಿಂದ ಹಿಡಿದು ಪಟ್ಟಣದ ಸಂಚಾರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಮುಂದಿನ ಪೀಳಿಗೆಗೆ ಹೆಚ್ಚು ಅನುಕೂಲವಾಗುವ ದೂರದೃಷ್ಟಿಯಿಂದ ಈಗಾಗಲೇ ಬೈಪಾಸ್ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, 367 ರಾಷ್ಟ್ರೀಯ ಹೆದ್ದಾರಿ ಯೋಜನೆಯು 2014 ರಲ್ಲಿಯೇ ಮಂಜೂರಾಗಿದ್ದು, ಅಂದಿನ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಸಹಕಾರದಿಂದ ಭಾನಾಪುರ- ಕುಕನೂರು, ಯಲಬುರ್ಗಾ- ಗಜೇಂದ್ರಗಡ ಮಾರ್ಗವಾಗಿ ಬಾಗಲಕೋಟೆಯ ಜಿಲ್ಲೆಯ ಗದ್ದನಕೇರಿಯವರೆಗೂ ಹೆದ್ದಾರಿ ಮಂಜೂರಾತಿಗೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ಕುಕನೂರು-ಯಲಬುರ್ಗಾ ಹಾಗೂ ಗಜೇಂದ್ರಗಡ ಬೈಪಾಸ್ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಹಿಂದಿನ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಕಾಮಗಾರಿಗೆ ವಿಳಂಬವಾಗಿತ್ತು. ಸದ್ಯ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ಹೆದ್ದಾರಿಗೆ ನೀಡಬೇಕಾದ ಶೇ.50 ಭೂ ಸ್ವಾಧೀನಕ್ಕೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿದೆ ಎಂದರು.

ಕುಕನೂರು ಪಟ್ಟಣಕ್ಕೆ 100 ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದು, ಸದ್ಯ 10 ಎಕರೆ ಭೂಮಿ ಬೇಕಾಗಿದೆ. ನ್ಯಾಯಾಲಯ, ತಹಸೀಲ್ದಾರ್ ಕಚೇರಿ, ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದು, ರೈತರು ಕೆರೆ ನಿರ್ಮಾಣಕ್ಕೆ ಭೂಮಿ ಒದಗಿಸಲು ಮುಂದೆ ಬರಬೇಕಾಗಿದೆ. ಇದರಿಂದ ನಮ್ಮ ಭಾಗದ ನೀರಾವರಿಗೆ ಒತ್ತು ನೀಡಲು ಸಾಧ್ಯವಾಗುತ್ತದೆ. ಕೇಂದ್ರದ ಮೋದಿ ಸರ್ಕಾರ ಇಂದಿಗೂ ಒಂದು ಹೊಸ ರೈಲು ಯೋಜನೆ ರೂಪಿಸಿಲ್ಲ. ಹಿಂದಿನ ಹಳೆಯ ಯೋಜನೆಯನ್ನು ಮುಂದುವರೆಸಿಕೊಂಡು ಹೊರಟಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಸಹಾಯಕ ಇಂಜಿನಿಯರ್ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ನೂರುದಿನ್‌ಸಾಬ್ ಗುಡಿಹಿಂದಲ್, ಉದ್ಯಮಿಗಳಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೆಮನಿ, ಪಪಂ ಸದಸ್ಯರಾದ ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಗಗನ್ ನೋಟಗಾರ, ರಫಿ ಹಿರೇಹಾಳ, ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ರಹಿಮಾನ್‌ಸಾಬ್ ಮಕ್ಕಪ್ಪನವರ, ವೀರಯ್ಯ ತೋಂಟದಾರ್ಯಮಠ, ಮಂಜುನಾಥ ಸೋಂಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net