ಮಲೆನಾಡಿನಲ್ಲಿ ಮಳೆ ಅಬ್ಬರ; ಈ ಬಾರಿಯೂ ಘಾಟಿ ಸಂಚಾರ ಸಂಕಷ್ಟ!

ವಿಜಯವಾಣಿ (4)
Published on

ಬೆಂಗಳೂರು-ಮಂಗಳೂರು ನಗರಗಳ ನಡುವೆ ನೂರಾರು ಕೋಟಿ ರೂ.ಗಳ ವಾಣಿಜ್ಯ ವ್ಯವಹಾರ ನಡೆಯುತ್ತದೆ. ಎನ್​ಎಂಪಿಎ, ಎಂಆರ್​ಪಿಎಲ್, ಎಂಎಸ್​ಇಝುಡ್ ಸಹಿತ ದೇಶದ ಬೃಹತ್ ಆರ್ಥಿಕ ವ್ಯವಹಾರ ನಡೆಸುವ ಉದ್ದಿಮೆಗಳೂ ರಾಜ್ಯದ ಕರಾವಳಿ ಭಾಗದಲ್ಲಿವೆ. ಜತೆಗೆ ಮಂಗಳೂರಿನೊಂದಿಗೆ ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳ ಮಧ್ಯೆ ತರಕಾರಿ, ದಿನಸಿ ಸಾಮಗ್ರಿ, ಇಂಧನ ಸೇರಿ ವಿವಿಧ ರೀತಿಯ ಉದ್ಯಮ ವ್ಯವಹಾರ ನಂಟಿದೆ. ಈ ಭಾಗದಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳೂ ಇರುವುದರಿಂದ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ 1-2 ತಿಂಗಳು ಎರಡೂ ನಗರಗಳ ನಡುವೆ ರಸ್ತೆ ಸಂಪರ್ಕ ಸ್ಥಗಿತವಾದರೆ ಕೋಟ್ಯಂತರ ರೂ. ನಷ್ಟ ಖಚಿತ. ಈ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಹಲವು ಘಾಟಿಗಳ ಹೆದ್ದಾರಿಗಳಲ್ಲಿ ಪ್ರತಿವರ್ಷವೂ ಮಳೆಗಾಲದಲ್ಲಿ ಅಡೆತಡೆ ಇದ್ದಿದ್ದೆ.

ಬರೆ ಕುಸಿತದಿಂದ ಸಂಭವಿಸಿದ ಅಪಘಾತ, ಸಾವಿನ ಸಂಖ್ಯೆಯೂ ಅಧಿಕ. ಈಗಲೂ ಈ ರಸ್ತೆಗಳಲ್ಲಿ ಕಡಿದಾದ ತಿರುವುಗಳಿದ್ದು ಸಂಚಾರ ಅಪಾಯವೇ ಸರಿ. ಈ ಸಲದ ಮುಂಗಾರು ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದು ಮಳೆಯೂ ಭರ್ಜರಿಯಾಗಿಯೇ ಸುರಿಯುತ್ತಿದೆ. ಮುಂದೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಇಂಥ ಸನ್ನಿವೇಶದಲ್ಲಿ ಕರಾವಳಿ ಜಿಲ್ಲೆಗಳಿಗೆ ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆಗಳು ಎಷ್ಟು ಸುರಕ್ಷಿತ? ಸದ್ಯದ ಸ್ಥಿತಿ-ಗತಿ ಏನು? ಎಂಬ ಕುರಿತು ವಿಜಯವಾಣಿ ರಿಯಾಲಿಟಿ ಚೆಕ್ ಮೂಲಕ ನಿಮ್ಮ ಮುಂದಿಡುತ್ತಿದೆ.

ಅಪಾಯಕಾರಿ ಶಿರಾಡಿ ಮಾರ್ಗ

ಬೆಂಗಳೂರು ಸಂಪರ್ಕಿಸಲು ಶಿರಾಡಿ, ಚಾರ್ಮಾಡಿ, ಸಂಪಾಜೆ ಮಾರ್ಗಗಳಿದ್ದು, ಶಿರಾಡಿ ಘಾಟಿಯ ಸಂಚಾರ ಈ ಬಾರಿಯೂ ಸಂಚಕಾರವಾಗುವ ಸಾಧ್ಯತೆ ಗೋಚರಿಸುತ್ತಿದೆ. ಹೆದ್ದಾರಿ ವಿಸ್ತರಣೆ ಕಾರ್ಯ ಸ್ಥಗಿತಗೊಂಡಿದ್ದರಿಂದ ನೆಲ್ಯಾಡಿ ರಸ್ತೆ ಅತಂತ್ರದಲ್ಲಿದೆ. ದ.ಕ. ಜಿಲ್ಲೆಯ ಶಿರಾಡಿ ಘಾಟಿಯ ಅಡ್ಡಹೊಳೆಯಿಂದ ಹಾಸನ ಜಿಲ್ಲೆಯ ಮಾರ್ನಹಳ್ಳಿವರೆಗೆ ಕಾಂಕ್ರೀಟ್ ರಸ್ತೆ ಆಗಿ ಸುಗಮ ಸಂಚಾರ ಸಾಧ್ಯವಾಗಿದೆ. ಆದರೆ ಆ ಬಳಿಕ ಮಾರ್ನಹಳ್ಳಿಯಿಂದ ಸಕಲೇಶಪುರವರೆಗೆ ಸುಮಾರು 15 ಕಿ.ಮೀ. ಕಾಮಗಾರಿ ಪೂರ್ಣಗೊಂಡಿಲ್ಲ. ಸಕಲೇಶಪುರದ ಆನೆಮಹಲ್​ನಿಂದ ಆರಂಭಿಸಿ ಮಾರ್ನಹಳ್ಳಿಯ ಹೆಗ್ಗದ್ದೆಯವರೆಗೆ ಕಾಂಕ್ರೀಟ್ ರಸ್ತೆಗೆ ಬೇಡಿಕೆಯಿರಿಸಿ ಸರಿಸುಮಾರು 7-8 ವರ್ಷವೇ ಕಳೆದಿದೆ. ಈ ಪೈಕಿ ಕೆಲವು ಕಡೆಯಲ್ಲಿ ಮಾತ್ರ ಕಾಂಕ್ರೀಟ್ ಹಾಕಿಸಲಾಗಿದೆ. ರಸ್ತೆ ವಿಸ್ತರಣೆಗೆ ಕೆಲವೆಡೆ 2 ಬದಿಯಲ್ಲಿ 100 ಅಡಿಯಷ್ಟು ಗುಡ್ಡ ಬಗೆಯಲಾಗಿದೆ. ಈ ಬಾರಿಯೂ ಮಣ್ಣು ಕುಸಿದು ಮಂಗಳೂರು-ಬೆಂಗಳೂರು ವಾಹನ ಸಂಚಾರ ಸ್ಥಗಿತವಾಗುವ ಸಮಸ್ಯೆ ಇದೆ. ಮಾರ್ನಹಳ್ಳಿಯ ಮೇಲ್ಭಾಗದ ದೊಡ್ಡತಪ್ಪಲು ಬಳಿ ಗುಡ್ಡ ಕುಸಿತವಾಗುತ್ತಿದ್ದು, ತೆರವು ಕಾರ್ಯ ನಿರಂತರ ನಡೆಯುತ್ತಿದೆ.

ಮಾರನಹಳ್ಳಿ- ಸಕಲೇಶಪುರ ಮಧ್ಯೆ ಬಹುತೇಕ ಕಾಮಗಾರಿ ನಡೆದಿದೆ. ಉಳಿಕೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಇಲ್ಲಿ ಹೆಚ್ಚುವರಿಯಾಗಿ 2 ಎಕರೆ ಭೂಮಿಯ ಅಗತ್ಯ ಇದೆ. ಭೂಮಿ ಪಡೆಯುವ ಸಂಬಂಧ ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ಶಿರಾಡಿ ಸಂಚಾರ ಬಂದ್ ಮಾಡುವ ಪ್ರಸ್ತಾವ ಇಲ್ಲ. | ಸತ್ಯಭಾಮಾ ಸಿ. ಹಾಸನ ಜಿಲ್ಲಾಧಿಕಾರಿ ಸಂಪಾಜೆ ಮತ್ತು ಚಾರ್ವಡಿ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಸದ್ಯಕ್ಕೆ ಸುಗಮ ಸಂಚಾರ ವ್ಯವಸ್ಥೆ ಇದೆ. ಶಿರಾಡಿ ವ್ಯಾಪ್ತಿಯ ಮಾರನಹಳ್ಳಿ-ಸಕಲೇಶಪುರ ಹೆದ್ದಾರಿ ಸುತ್ತಮುತ್ತ ಸಮಸ್ಯೆಯಾದರೆ ಹೆದ್ದಾರಿ ಸಂಚಾರಕ್ಕೆ ತೊಂದರೆ ಹೆಚ್ಚು. ಸದ್ಯಕ್ಕೆ ಮಂಗಳೂರು-ಬೆಂಗಳೂರು ಸಂಪರ್ಕಕ್ಕೆ ತೊಂದರೆ ಇಲ್ಲ. | ಮುಲ್ಲೈ ಮುಗಿಲನ್ ದ.ಕ. ಜಿಲ್ಲಾಧಿಕಾರಿ

ಕೊಡಚಾದ್ರಿ ಘಟ್ಟದಲ್ಲಿ ಓಡಾಟಕ್ಕೆ ತೊಡಕಿಲ್ಲ

ಕರಾವಳಿ ಭಾಗವಾದ ಉಡುಪಿ- ಕುಂದಾಪುರದಿಂದ ಬೆಂಗಳೂರಿಗೆ ತೆರಳಲು ಇರುವ ಇನ್ನೊಂದು ಮಾರ್ಗವಾದ ಕೊಡಚಾದ್ರಿ (ಕೊಲ್ಲೂರು) ಘಟ್ಟ ಮಾರ್ಗದಲ್ಲಿ ಸದ್ಯ ತೊಂದರೆ ಇಲ್ಲ. ಈವರೆಗೂ ಎಲ್ಲಿಯೂ ಭೂಕುಸಿತ ಆಗಿಲ್ಲ. ವಾಹನಗಳ ಸಂಚಾರ ಸುಗಮವಾಗಿದೆ. ಯಾವುದೇ ಸಮಸ್ಯೆ ಎದುರಾದರೂ ತ್ವರಿತ ಕಾರ್ಯಾಚರಣೆ ಕೈಗೊಳ್ಳುವ ನಿಟ್ಟಿನಲ್ಲಿ ಈ ಮಾರ್ಗದ ವ್ಯಾಪ್ತಿಗೆ ಬರುವ ಕಾರ್ಕಳ ಹಾಗೂ ಶಿವಮೊಗ್ಗ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ನಡೆಸುತ್ತಿದ್ದಾರೆ. ಕೊಲ್ಲೂರು ಮತ್ತು ಹೊಸನಗರ ಪೊಲೀಸ್ ಇಲಾಖೆಯೂ ಕಣ್ಗಾವಲಿಟ್ಟಿದೆ.

ಮಾಳ ಘಾಟಿ ಪ್ರಯಾಣ ಬಲು ಕಷ್ಟ!

ಮಳೆಗಾಲ ಬಂತೆಂದರೆ ಮಾಳ ಘಾಟಿಯ ಕಿರಿದಾದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವಭಯದಲ್ಲೇ ಸಾಗಬೇಕಾಗಿದೆ. ಒಂದೆಡೆ ನಿರಂತರ ಮಳೆಯಿಂದ ಮಂಜು ಕವಿದ ವಾತಾವಾರಣ. ಮತ್ತೊಂದೆಡೆ ಗುಡ್ಡದಿಂದ ಬೀಳುವ ಕಲ್ಲು ಬಂಡೆ, ಮರಗಳು ಹೀಗೆ ಘಾಟಿ ರಸ್ತೆ ಸಂಚಾರ ನಿಜಕ್ಕೂ ಅಪಾಯಕಾರಿಯಾಗಿದೆ. ಕುದುರೆಮುಖ ಮಾಳ ರಾಷ್ಟ್ರೀಯ ಹೆದ್ದಾರಿ ದಟ್ಟ ಅರಣ್ಯದೊಳಗೆ ಹಾದು ಹೋಗಿದ್ದು, ಇದೇ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶೃಂಗೇರಿ, ಕಳಸ, ಹೊರನಾಡು, ಸೇರಿ ಅನೇಕ ಪ್ರವಾಸಿತಾಣಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರ ವಾಹನಗಳು ಮಾಳ ಘಾಟಿಯಲ್ಲಿ ಸಂಚರಿಸುತ್ತವೆ. ಇಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ವರ್ಷ ಈ ರಸ್ತೆಯಲ್ಲಿ ಮರಗಳು ಬೀಳುವುದು, ಗುಡ್ಡ ಜರಿತ ಉಂಟಾಗುವುದು ಮಾಮೂಲಾಗಿದೆ.

ಹೀಗಾಗಿ ಈ ರಸ್ತೆ ಸಂಚಾರದಲ್ಲಿ ಎಚ್ಚರಿಕೆ ಮುಖ್ಯವಾಗಿದೆ. ಈ ರಸ್ತೆಯ ಮಾಹಿತಿಯಿಲ್ಲದೆ ಬರುವ ವಾಹನ ಸವಾರರು ಮಳೆಗಾಲದಲ್ಲಿ ಎಚ್ಚರ ವಹಿಸಬೇಕು. ಕಾರ್ಕಳ ತಾಲೂಕಿನ ಗಡಿಭಾಗದಲ್ಲಿರುವ ಎಸ್​ಕೆ ಬಾರ್ಡರ್​ನಿಂದ ಮೇಲೆ ಹೋಗುವ ಈ ರಸ್ತೆ ಅದೆಷ್ಟೋ ಪ್ರಾಣಗಳನ್ನು ಬಲಿ ಪಡೆದಿದೆ. ಘಾಟಿ ಇಳಿಯುವಾಗಲೂ ಎಚ್ಚರಿಕೆ ಅಗತ್ಯ. ತನಿಕೋಡು ಅರಣ್ಯ ತಪಾಸಣಾ ಕೇಂದ್ರದಿಂದ ಮಾಳ ಅರಣ್ಯ ತಪಾಸಣಾ ಕೇಂದ್ರದವರೆಗೆ ಮೊಬೈಲ್ ನೆಟ್​ವರ್ಕ್ ಸರಿಯಿಲ್ಲ. ಮಾಳ ತಪಾಸಣಾ ಗೇಟ್, ಎಸ್​ಕೆ ಬಾರ್ಡರ್ ದಾಟಿ ಮುಂದಕ್ಕೆ ಕಳಸ, ಶೃಂಗೇರಿ ಹಾಗೂ ಇನ್ನಿತರ ಸ್ಥಳಗಳಿಗೆ ಸಾಗುವ ದಾರಿ ಮಧ್ಯೆ ಹಲವಾರು ಸಮಸ್ಯೆಗಳಿವೆ.

ಸದ್ಯಕ್ಕೆ ಚಾರ್ಮಾಡಿಯೇ ಸುರಕ್ಷಿತ

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಸಂಪರ್ಕಿಸುವ ಚಾರ್ವಡಿ ಘಾಟಿಯ ಕೆಲವು ವ್ಯಾಪ್ತಿ ಚಿಕ್ಕಮಗಳೂರಿಗೆ ಸೇರಿದ್ದು, ಈ ಭಾಗದಲ್ಲಿ ತಡೆಗೋಡೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 2019ರಲ್ಲಿ ಭಾರಿ ನೆರೆ ಹಾಗೂ ಮಳೆಗೆ ಚಾರ್ವಡಿ ಘಾಟಿಯ ಹಲವೆಡೆ ತಡೆಗೋಡೆ ಕುಸಿತ, ಗುಡ್ಡ ಜರಿತ, ಮಣ್ಣಿನ ಸವಕಳಿ, ರಸ್ತೆ ಕೊಚ್ಚಿಹೋಗುವಿಕೆ ಸಹಿತ ಅನೇಕ ಪ್ರಾಕೃತಿಕ ಹಾನಿ ಸಂಭವಿಸಿದ್ದವು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ತಿಂಗಳು ಈ ಭಾಗದಲ್ಲಿ ಸಂಚಾರ ನಿಷೇಧಿಸಲಾಗಿತ್ತು. ಇದೀಗ 19.5 ಕೋಟಿ ರೂ. ವೆಚ್ಚದ ತಡೆಗೋಡೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಹಲವೆಡೆ ತಡೆಗೋಡೆ, ತಡೆಬೇಲಿ ನಿರ್ಮಾಣ, ಮಳೆ ನೀರು ಸೂಕ್ತ ಹರಿವಿಗೆ ವ್ಯವಸ್ಥೆ ಮಾಡಲಾಗಿದೆ.

8ರಿಂದ 10 ಕಡೆ ಹಲವು ಮೀಟರ್ ಉದ್ದದ ತಡೆಗೋಡೆ ಹಾಗೂ ಬಂಡೆಕಲ್ಲು, ಕಣಿವೆ ಪ್ರದೇಶಗಳಲ್ಲಿ ತಡೆಬೇಲಿ ನಿರ್ವಿುಸಲಾಗಿದೆ. ಕಾಮಗಾರಿ ನಡೆದಿರುವ ಸ್ಥಳ, ಮೋರಿಗಳನ್ನು ನಿರ್ವಿುಸಿರುವ ರಸ್ತೆಯಲ್ಲಿ ಇನ್ನಷ್ಟೇ ಡಾಂಬರು ಕಾಮಗಾರಿ ನಡೆಯಬೇಕಿದೆ. ರಸ್ತೆಯ ಕೆಲವೆಡೆ ಹೊಂಡಗಳು ನಿರ್ವಣವಾಗಿದ್ದು, ಅವುಗಳನ್ನು ಕೂಡಲೇ ಮುಚ್ಚುವ ಅಗತ್ಯವಿದೆ. ದ.ಕ. ವ್ಯಾಪ್ತಿಯ ಅಭಿವೃದ್ಧಿ ಬಾಕಿ: ಚಾರ್ಮಾಡಿ ಘಾಟಿಯು 25 ಕಿ.ಮೀ.ವ್ಯಾಪ್ತಿಯಿದ್ದು, ಈ ಪೈಕಿ 12 ಕಿ.ಮೀ. ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. ದಕ್ಷಿಣ ಕನ್ನಡ ವ್ಯಾಪ್ತಿಯ ಕಾಮಗಾರಿ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಚಿಕ್ಕಮಗಳೂರು ವಿಭಾಗದ ಘಾಟಿ ಅಭಿವೃದ್ಧಿ ಕಾಮಗಾರಿಗೆ ಈವರೆಗೆ ಯಾವುದೇ ಅಧಿಸೂಚನೆ ಪ್ರಕಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ಣಗೊಳ್ಳದ ಚತುಷ್ಪಥ ಕಾಮಗಾರಿ

ರಾಷ್ಟ್ರಿಯ ಹೆದ್ದಾರಿ-75ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಮಳೆಗಾಲದಲ್ಲಿ ಮಂಗಳೂರು- ಬೆಂಗಳೂರು ಪ್ರಯಾಣಿಕರಿಗೆ ಸಮಸ್ಯೆ ಅನಿವಾರ್ಯ. ಹಾಸನ ಹೊರವರ್ತಲ ರಸ್ತೆಯಿಂದ ತಾಲೂಕಿನ ಹೆಗ್ಗದ್ದೆ ಗ್ರಾಮದ ಹೊರವಲಯದವರೆಗಿನ 45 ಕಿ.ಮೀ. ರಸ್ತೆ ಚತುಷ್ಪಥಕ್ಕೆ 2016ರಲ್ಲಿ ಟೆಂಡರ್ ಕರೆಯಲಾಗಿದ್ದು, 2019ರ ಏಪ್ರಿಲ್​ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್ ಕಂಪನಿ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 45 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂಕುಸಿತಕ್ಕೆ ಕಾರಣವಾಗಿತ್ತು. ಕಾಮಗಾರಿ ಆರಂಭವಾದ ನಂತರ ಹೆದ್ದಾರಿ ಪ್ರಾಧಿಕಾರ ರಸ್ತೆ ನಿರ್ವಹಣೆ ಕೈಬಿಟ್ಟರೆ, ಇತ್ತ ರಸ್ತೆ ನಿರ್ವಣದ ಹೊಣೆ ಹೊತ್ತ ಗುತ್ತಿಗೆದಾರರು ನಿರ್ವಹಣೆಯ ಹೊಣೆಯಿಂದ ನುಣುಚಿಕೊಂಡ ಪರಿಣಾಮ 45 ಕಿ.ಮೀ. ರಸ್ತೆಯಲ್ಲಿ ನಿರ್ವಣವಾಗಿದ್ದ ಹೊಂಡಗಳು ಲೆಕ್ಕಕ್ಕೆ ಸಿಗದಂತಾಗಿತ್ತು.

ಸದ್ಯ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್​ಕಮಲ್ ಕಂಪನಿಯ ಗುತ್ತಿಗೆ ಅವಧಿ 2023 ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಿದೆ. ಈ ಅವಧಿಯ ವೇಳೆಗೆ ಸಕಲೇಶಪುರದವರೆಗಿನ 35 ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಸಕಲೇಶಪುರದಿಂದ-ಹೆಗ್ಗದ್ದೆ ಗ್ರಾಮದವರೆಗಿನ ಕಾಮಗಾರಿ ಸದ್ಯ ಪ್ರಗತಿಯ ಹಂತದಲ್ಲಿದೆ. ಈ ಬಾರಿಯ ಮಳೆಗಾಲದ ವೇಳೆಗೆ ಕಾಮಗಾರಿ ಮುಗಿಸುವ ಗುರಿಯೊಂದಿಗೆ ಬೇಸಿಗೆಯಲ್ಲಿ ಶರವೇಗದಲ್ಲಿ ಕಾಮಗಾರಿ ನಡೆಸಲಾಯಿತ್ತಾದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸಕಲೇಶಪುರ-ಹೆಗ್ಗದ್ದೆ ನಡುವಿನ 10 ಕಿ.ಮೀ. ರಸ್ತೆ ಶೇ.70 ಕಾಮಗಾರಿ ಮುಗಿದಿದೆ. ಭಾರಿ ಪ್ರಮಾಣದ ಭೂಕುಸಿತಕ್ಕೆ ಸಾಕ್ಷಿಯಾಗಿರುವ ದೊಡ್ಡತಪ್ಪಲೆ ಗ್ರಾಮ ಸಮೀಪ ಸುಮಾರು 2 ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಈ ಪ್ರದೇಶದಲ್ಲಿ ತಡೆಗೋಡೆ ಹಾಗೂ ರೈಲ್ವೆ ರಸ್ತೆ ಬರುವುದರಿಂದ ಹೆದ್ದಾರಿಯನ್ನು ಎತ್ತರಿಸುವ ಕಾಮಗಾರಿ ನಡೆಸಲಾಗುತ್ತಿದೆ.

ಇದಲ್ಲದೆ ದೋಣಿಗಾಲ್ ಗ್ರಾಮ ಸಮೀಪ ನಾಲ್ಕು ವರ್ಷಗಳ ಹಿಂದೆ ಬಹುತೇಕ ಹೆದ್ದಾರಿ ಕುಸಿದಿದ್ದು, ಇಲ್ಲಿ ರಸ್ತೆ ಮರು ನಿರ್ಮಾಣ ಮಾಡುವುದು ಗುತ್ತಿಗೆದಾರರಿಗೆ ಸವಾಲಾಗಿದೆ. ಹೆದ್ದಾರಿಯ ಒಂದು ಬದಿ ಸುಮಾರು 400 ಮೀಟರ್​ಗೂ ಅಧಿಕ ಕುಸಿದಿದ್ದು, ಕಡಿದಾದ ಪ್ರಪಾತದಲ್ಲಿ ರಸ್ತೆ ನಿರ್ಮಾಣ ಮಾಡುವುದು ಗುತ್ತಿಗೆದಾರರಿಗೆ ಸವಾಲಾಗಿದೆ. ಕಳೆದ ಬಾರಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಭೂಕುಸಿತವಾಗಿರಲಿಲ್ಲ. ಆದರೆ, ಈ ಬಾರಿ ಈಗಾಗಲೇ ಭೂಕುಸಿತದ ಸುಳಿವು ಗೋಚರಿಸುತ್ತಿದ್ದು ಅಲ್ಲಲ್ಲಿ ಬಿರುಕುಗಳು ಮೂಡಲಾರಂಭಿಸಿವೆ. ಭೂ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ನಿರ್ವಿುಸುತ್ತಿರುವ ತಡೆಗೋಡೆ ಕಾಮಗಾರಿ ತೀರಾ ಕಳಪೆಯಾಗಿದೆ. ಕಳೆದ ನಾಲ್ಕು ದಿನಗಳ ಮಳೆಗೆ ಈ ತಡೆಗೋಡೆ ಹಲವೆಡೆ ಕುಸಿದಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net