ಹುಲಿಕಲ್ ರಸ್ತೆಯಲ್ಲಿ ಸಂಚಾರ ಗೊಂದಲ

hos hulikal
ಮಾಸ್ತಿಕಟ್ಟೆಯಲ್ಲಿ ನಿಂತಿರುವ ಭಾರಿ ವಾಹನ.
Published on

ಹೊಸನಗರ: ಹುಲಿಕಲ್ ಘಾಟ್ (ಬಾಳೆಬರೆ) ಮಾರ್ಗದಲ್ಲಿ ಮಣ್ಣು ಕುಸಿತವಾದ ಹಿನ್ನೆಲೆಯಲ್ಲಿ ಆ.6ರಿಂದ ಬೃಹತ್ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೆ ಅಗತ್ಯ ಸ್ಥಳಗಳಲ್ಲಿ ಪರ್ಯಾಯ ಮಾರ್ಗಸೂಚಿ ಫಲಕ ಅಳವಡಿಸದ ಕಾರಣ ವಾಹನ ಚಾಲಕರು ಹುಲಿಕಲ್ ಘಾಟ್‌ವರೆಗೆ ಬಂದು ವಾಪಸ್ ಹೋಗುತ್ತಿದ್ದಾರೆ.

ಹುಲಿಕಲ್ ಮಾರ್ಗದ ಬದಲಿಗೆ ನಗರ- ಕೊಲ್ಲೂರು- ಬೈಂದೂರು- ಹೊನ್ನಾವರ ಮಾರ್ಗ ಸೂಚಿಸಲಾಗಿದೆ. ಆದರೆ ಪರ್ಯಾಯದ ಹಲವು ಮಾರ್ಗಗಳ ತಿರುವಿನ ಜಾಗದಲ್ಲಿ ಈವರೆಗೂ ಮಾರ್ಗಸೂಚಿ ಫಲಕ ಅಳವಡಿಸಿಲ್ಲ. ಹೀಗಾಗಿ ಮಾಹಿತಿ ಇರದ ಭಾರಿ ವಾಹನಗಳ ಚಾಲಕರು ಪ್ರತಿದಿನ ಇದೇ ಮಾರ್ಗದಲ್ಲಿ ಬರುತ್ತಿದ್ದಾರೆ. ಹತ್ತಿರಕ್ಕೆ ಬಂದ ಮೇಲೆ ಸಂಚಾರ ನಿಷೇಧ ಫಲಕ ನೋಡಿ ವಾಪಸಾಗುವಂತಾಗಿದೆ.

ತೀರ್ಥಹಳ್ಳಿ ಕೈಮರ, ಶಿವಮೊಗ್ಗ ಆಯನೂರು ಮಾರ್ಗದಿಂದ ಹೆಚ್ಚಿನ ಲಾರಿಗಳು ಬರುತ್ತಿವೆ. ಪರ್ಯಾಯ ಮಾರ್ಗಕ್ಕೆ ತಿರುಗಬೇಕಾದ ಮಹತ್ವದ ಕ್ರಾಸ್‌ಗಳಲ್ಲಿ ಪರ್ಯಾಯ ಮಾರ್ಗದ ಮಾರ್ಗಸೂಚಿ ಫಲಕವನ್ನು ಈವರೆಗೆ ಅಳವಡಿಸಿಲ್ಲ. ತುಂಬ ದೂರದಿಂದ ಬಂದಿದ್ದೇವೆ. ಡೀಸೆಲ್ ಕೊರತೆ ಇದೆ. ವೆಚ್ಚ ಹೆಚ್ಚಾಗುತ್ತದೆ. ಇದನ್ನು ಚಾಲಕರೇ ಭರಿಸಬೇಕು. ಈ ಮಾರ್ಗದಲ್ಲಿ ಬಂದ ತಪ್ಪಿಗೆ ಒಮ್ಮೆ ಈ ಮಾರ್ಗದಲ್ಲಿ ಅವಕಾಶ ಕೊಡಿ ಎಂದು ಹುಲಿಕಲ್ ಹತ್ತಿರದ ಚೆಕ್‌ಪೋಸ್ಟ್ ಸಿಬ್ಬಂದಿ ಬಳಿ ಚಾಲಕರು ಗೋಗರೆಯುತ್ತಿದ್ದಾರೆ. ಬೇರೆ ದಾರಿ ಕಾಣದೆ ಗೊಣಗುತ್ತ ವಾಪಸ್ ಹೋಗತ್ತಿದ್ದಾರೆ.

ಹುಲಿಕಲ್ ಮಾರ್ಗದಲ್ಲಿ ಸಂಚಾರ ನಿಷೇಧಿಸಲು ಒಂದು ತಿಂಗಳು ಸಮಯ ಇದ್ದರೂ ಲೋಕೋಪಯೋಗಿ ಇಲಾಖೆ ಪರ್ಯಾಯ ಮಾರ್ಗಸೂಚಿ ಫಲಕ ಅಳವಡಿಕೆಗೆ ಕ್ರಮ ಕೈಗೊಂಡಿಲ್ಲ. ಇದರಿಂದ ಪ್ರತಿದಿನ ಲಾರಿ, ಟ್ರಕ್, ಕಂಟೈನರ್‌ಗಳು ಮಾಸ್ತಿಕಟ್ಟೆಗೆ ಬಂದು ವಾಪಸಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net