

ಬೆಟ್ಟದಪುರ: ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿಕೊಂಡರೆ ರಸ್ತೆ ಸುರಕ್ಷಾ ವಲಯವಾಗಲಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಪೊಲೀಸ್ ಇಲಾಖೆವತಿಯಿಂದ ಗುರುವಾರ ಆಯೋಜಿಸಿದ್ದ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲೂ ರಸ್ತೆ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಬೇಕು ಎಂದರು.
ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ನಮ್ಮ ರಕ್ಷಣೆ ಜತೆಗೆ ಇತರರ ರಕ್ಷಣೆಗೂ ಸಹಾಯಕವಾಗುತ್ತದೆ. ಯಾವುದೇ ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ, ಮಿತವಾದ ವೇಗ ಪಾಲನೆ ಮಾಡಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಉತ್ತಮ. 18 ವರ್ಷದ ನಂತರ ಪರವಾನಗಿ ಪಡೆದವರೇ ದ್ವಿಚಕ್ರ ವಾಹನ ಚಾಲನೆ ಮಾಡಬೇಕು. ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಸುಭದ್ರವಾಗಿ ಇಟ್ಟುಕೊಳ್ಳಬೇಕು ಎಂದರು.
ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ, ಸಿಬ್ಬಂದಿಗಳಾದ ರಘು, ಶತ್ರುಘ್ನ, ದಿಲೀಪ್, ರಮೇಶ್, ಬಸವರಾಜು, ರವೀಶ್, ಸತೀಶ್ ಇತರರು ಇದ್ದರು.