

ರಾಣೆಬೆನ್ನೂರ: ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಗಮನ ವಹಿಸಬೇಕಾಗಿದೆ ಎಂದು ದಾವಣಗೆರೆಯ ಎಸ್.ಎಸ್. ಕೇರ್ ಟ್ರಸ್ಟ್ನ ಡಾ. ಅರುಣಕುಮಾರ ಹೇಳಿದರು.
ನಗರದ ವರ್ತಕರ ಸಂಘದಲ್ಲಿ ಬುಧವಾರ ಸ್ಥಳಿಯ ವರ್ತಕರ ಸಂಘ, ರೋಟರಿ ಸಂಸ್ಥೆ ವತಿಯಿಂದ ದಾವಣಗೆರೆಯ ಎಸ್.ಎಸ್. ಕೇರ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ವಯಸ್ಸಾದ ನಂತರ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ಖಾಯಿಲೆ ಬರುವುದು ಖಚಿತ. ಇಂತಹ ಶಿಬಿರದಲ್ಲಿ ವೈದ್ಯರಿಂದ ತಪಾಸಣೆಗೆ ಒಳಗಾಗುವುದರಿಂದ ಯಾವುದಾದರೂ ಕಾಯಿಲೆ ಇದ್ದರೂ ಅದು ಅರಿವಿಗೆ ಬರುತ್ತದೆ. ಇದರಿಂದ ಅಂತಹ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ. ಆರೋಗ್ಯ ಶಿಬಿರಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಪಾಲಿಗೆ ಉಪಯುಕ್ತವಾಗಿವೆ ಎಂದರು.
ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಶಿಬಿರ ಉದ್ಘಾಟಿಸಿದರು. ದಾವಣಗೆರೆ ಎಸ್.ಎಸ್. ಕೇರ್ ಟ್ರಸ್ಟ್ನ ಡಾ. ಅಶ್ವಿನಿಕುಮಾರ ಸೇರಿದಂತೆ 40 ವೈದ್ಯರ ತಂಡ ಶಿಬಿರದಲ್ಲಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಉಪಾಧ್ಯಕ್ಷ ನಾಗರಾಜ ಪವಾರ, ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ರೋಟರಿ ಕ್ಲಬ್ ಅಧ್ಯಕ್ಷ ವೀರೇಶ ಮೋಟಗಿ, ಡಾ. ಬಸವರಾಜ ಕೇಲಗಾರ, ಉಮೇಶ ಹೊನ್ನಾಳಿ, ಕೆ.ವಿ. ಶ್ರೀನಿವಾಸ, ಪ್ರಕಾಶ ಹೊನ್ನಾಳಿ, ಎಂ.ಆರ್. ಪಾಟೀಲ, ಸದಾಶಿವ ಉಪ್ಪಿನ, ಶಿವರಾಜ ಬಾರಾಟಕ್ಕೆ, ವಿನೋದ ಜಂಬಗಿ, ಬಿ.ಎಸ್. ಸಣ್ಣಗೌಡ್ರ, ವಿ.ಪಿ. ಪೋಲಿಸಗೌಡ್ರ, ಗುರುಪ್ರಕಾಶ ಜಂಬಗಿ ಮತ್ತಿತರರಿದ್ದರು.