

ಗೋಣಿಕೊಪ್ಪ: ಪಟ್ಟಣದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಬೆಂಗಳೂರಿನಿಂದ ಟ್ರಾಫಿಕ್ ತಜ್ಞರ ಸಲಹೆ ಪಡೆದು ಬಗೆಹರಿಸಲಾಗುವುದು ಎಂದು ವಿರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್ ಭರವಸೆ ನೀಡಿದರು.
ಪರಿಮಳ ಮಂಗಳ ವಿಹಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಆಟೋ ರಿಕ್ಷಾಗಳು, ಬಸ್‌ಗಳ ಸಂಚಾರ ಮತ್ತು ನಿಲುಗಡೆ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು. ವಿಸ್ತರಣೆಗೊಳ್ಳದ ಕಿರಿದಾದ ರಸ್ತೆಗಳಿಂದ ಮತ್ತು ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ಇದನ್ನು ನಿಯಂತ್ರಿಸಲು ಸ್ಥಳೀಯ ವರ್ತಕರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಚಾಲಕರು ಹಾಗೂ ವ್ಯಾಪಾರಿಗಳು ತಮ್ಮ ವೈಯಕ್ತಿಕ ಇಚ್ಛೆಗಳ ನಡುವೆಯೂ ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಹೊಂದಿದಾಗ ಪಟ್ಟಣದ ಬಹುತೇಕ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಪೊಲೀಸರ ಜತೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಪೊನ್ನಂಪೇಟೆ ತಿರುವಿನಲ್ಲಿ ಸಿಗ್ನಲ್ ಅಳವಡಿಕೆ, ಸಿ.ಸಿ.ಕ್ಯಾಮರಾ ಅಳವಡಿಕೆ, ಹೆಚ್ಚು ಟ್ರಾಫಿಕ್ ಸಿಬ್ಬಂದಿ ನಿಯೋಜನೆ, ವಾಹನ ನಿಲುಗಡೆಗೆ ಕ್ರಮಬದ್ಧ ವ್ಯವಸ್ಥೆ ರೂಪಿಸುವಂತೆ, ಸ್ವಾತಂತ್ರ್ಯ ಹೋರಾಟಗಾರರ ಭವನದ ಸಂಚಾಲಕ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಸುನೀಲ್ ಮಾದಪ್ಪ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತ್ತಾಯ, ಜಿ.ಪಂ. ನ್ಯಾಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ.ಬೋಪಣ್ಣ, ಆಟೋ ಚಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿಮ್ಮ ಸುಬ್ಬಯ್ಯ, ಮಚೆರ್ಂಟ್ಸ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ, ಶಾಫಿ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಸಭೆಯ ಗಮನಕ್ಕೆ ತಂದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ದಲಿತರ ಸಮಸ್ಯೆಗಳಿಗೆ ಸ್ಪಂದನೆಯಾಗುವ ದಲಿತಪರ ಸಭೆಗಳನ್ನು ನಡೆಸುವಂತೆ ಮನವಿ ಮಾಡಿದರು. ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್.ಗೋವಿಂದಪ್ಪ, ಮಾದಕ ಪದಾರ್ಥಗಳ ಮಾರಾಟ, ಸೇವನೆ, ಒಂದಂಕಿ ಕೇರಳ ಲಾಟರಿ ಮಾರಾಟದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.
ಬಗರ್ ಹುಕುಂ ಸಮಿತಿ ತಾಲೂಕು ಮಾಜಿ ಅಧ್ಯಕ್ಷ ಗಿರೀಶ್ ಗಣಪತಿ, ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಬಗ್ಗೆ, ಹೆಲ್ಮೆಟ್ ಧರಿಸದೇ ದ್ವಿಚಕ್ರ ಚಾಲನೆ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸುಬ್ರಮಣಿ ಎಂ.ಎಸ್, ಮಳವಂಡ ಅರವಿಂದ್ ಕುಟ್ಟಪ್ಪ, ಖಾಸಗಿ ಬಸ್ಸ್ ಚಾಲಕರ ರಾಜ ಮಾತನಾಡಿದರು. ವೃತ್ತನಿರೀಕ್ಷ ಶಿವರಾಜ್ ಆರ್. ಮುದೋಳ್, ಠಾಣಾಧಿಕಾರಿಗಳಾದ ಪ್ರದೀಪ್‌ಕುಮಾರ್, ಕಾವೇರಪ್ಪ, ಸಿಬ್ಬಂದಿ ವಿರೇಶ್, ಕಾವೇರಮ್ಮ, ಇತರರು ಇದ್ದರು.