

ಶಿವಮೊಗ್ಗ : ವಿತರಕರ ಹಿತಕ್ಕಾಗಿ ಕೆಲವು ಯೋಜನೆಗಳನ್ನು ಅನುಷ್ಟಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕಂಪನಿ ಮತ್ತು ವಿತರಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶಯಗಳಿಗೆ ಸ್ಪಂದಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ನೂತನ ಅಧ್ಯಕ್ಷ ಎಂ.ಸಿ.ದೇವರಾಜ್ ಭರವಸೆ ನೀಡಿದರು.
ಜಿಲ್ಲಾ ವಿತರಕರ ಸಂಘದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಟ್ರೇಡ್ ಲೈಸೆನ್ಸ್ ಮೇಳ, ಫುಡ್ ಲೈಸೆನ್ಸ್ ಮೇಳ ಆಯೋಜಿಸಲಾಗುವುದು. ಎಪಿಎಂಸಿ ಮಾದರಿಯಲ್ಲಿ ಎಲ್ಲ ವಿತರಕರಿಗೂ ನಗರದಲ್ಲಿ ಒಂದೇ ಕಡೆ ವಿಶಾಲವಾದ ಜಾಗ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷರಾಗಿ ಬಿ.ಆರ್.ಬದರಿನಾಥ್, ಗಿರೀಶ್ ಒಡೆಯರ್(ಕಾರ್ಯದರ್ಶಿ), ಎಸ್.ವಿ.ಅರವಿಂದ ರಾವ್(ಸಹಕಾರ್ಯದರ್ಶಿ), ಕೆ.ಕೆ.ಚಂದ್ರಶೇಖರ್ ಖಜಾಂಚಿಯಾಗಿ ಆಯ್ಕೆಯಾದರು. ಸಭೆಯಲ್ಲಿ ನಿರ್ದೇಶಕರಾದ ಮೋಹನ್ ಕುಮಾರ್, ಮೊಹಮ್ಮದ್ ಇಕ್ಬಾಲ್, ವೈ.ಎಂ.ರಾಘವೇಂದ್ರ, ಎ.ಎಂ.ಕುಮಾರ್ ಹಾಗೂ ಕೆ.ವಿ.ಮಹಾರುದ್ರ ಇದ್ದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಮುಂತಾದವರು ವಿತರಕರ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ವಿತರಕರ ಸಂಘದ ಮಾಜಿ ಅಧ್ಯಕ್ಷ ಶಿವರಾಜ್ ಉಡುಗಣಿ, ಮಾಜಿ ಕಾರ್ಯದರ್ಶಿ ಕೆ.ಎಸ್.ಮೋಹನ್ ಉಪಸ್ಥಿತರಿದ್ದರು.