ಸಕಾಲಿಕ: ಸ್ವಾವಲಂಬಿ ಭಾರತ ನಿರ್ಮಾಣದತ್ತ...

edit 1
Published on

ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆರೋಗ್ಯ ಸಮಸ್ಯೆ ಮನುಕುಲವನ್ನು ಕಾಡುತ್ತಿದ್ದು ಜೀವನ ಶೈಲಿ ಮಾತ್ರವಲ್ಲದೆ ಜೀವನೋಪಾಯ ಮಾರ್ಗಗಳಲ್ಲಿಯೂ ಮಹತ್ವದ ಬದಲಾವಣೆಗಳು ಆಗುತ್ತಿವೆ. ಪ್ರತಿಯೊಂದು ದೇಶ ಈ ಮಹಾಮಾರಿಯನ್ನು ನಿಭಾಯಿಸಲು ಹೆಣಗುತ್ತಿವೆ. ಜನರ ಜೀವದ ರಕ್ಷಣೆ ಹಾಗೂ ಆರ್ಥಿಕ ಚಟುವಟಿಕೆಗಳ ಪುನರಾರಂಭದ ನಡುವೆ ಸಮತೋಲನ ಸಾಧಿಸುವುದು ಕಷ್ಟದ ಕೆಲಸವಾಗಿದೆ. ಅಪಾರ ಸಾಮರ್ಥ್ಯ ಹಾಗೂ ಸೂಕ್ಷ್ಮತೆಯೊಂದಿಗೆ ತೀರಾ ಕ್ಲಿಷ್ಟವಾದ ಹಾದಿಯಲ್ಲಿ ಭಾರತ ಸಾಗುತ್ತಿದೆ. ಹೀಗಿದ್ದರೂ, ಕರೊನಾ ವೈರಸ್​ನ ಸವಾಲು ಜನತೆಯ ನಡುವೆ ಸೌಹಾರ್ದತೆ ಹಾಗೂ ಏಕತೆ ಹುಟ್ಟುಹಾಕಿದೆ. ಕಷ್ಟಕಾಲದಲ್ಲಿ ನಾವು ಹೇಗೆ ಒಗ್ಗಟ್ಟಿನಿಂದ ಕೆಲಸ ಮಾಡಬಹುದೆಂಬುದನ್ನು ಅದು ಮತ್ತೊಮ್ಮೆ ತೋರಿಸಿಕೊಟ್ಟಿದೆ.

ನಾಲ್ಕು ಹಂತಗಳ ಲಾಕ್​ಡೌನ್ ನಂತರ ಮುಚ್ಚಿದ ಆರ್ಥಿಕತೆಯ ಬಾಗಿಲುಗಳನ್ನು ತೆರೆಯುವುದು ಮಾತ್ರವಲ್ಲ ಅವಕಾಶಗಳ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯುವತ್ತಲೂ ಭಾರತ ದೃಷ್ಟಿ ನೆಟ್ಟಿದೆ. ‘ಆತ್ಮನಿರ್ಭರ ಭಾರತ ಅಭಿಯಾನ’ ಹೆಸರಿನಲ್ಲಿ ದೇಶವನ್ನು ಸ್ವಾವಲಂಬಿಗೊಳಿಸುವ ಯೋಜನೆಯೊಂದನ್ನು ಅದು ರೂಪಿಸಿದೆ. ದೇಶದ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಶಕ್ತಿಗಳಿಗೆ ಚೈತನ್ಯ ತುಂಬುವುದು ಅದರ ಉದ್ದೇಶವಾಗಿದೆ.

ಜೂನ್ 1ರಂದು ಸರ್ಕಾರ ಕೈಗೊಂಡ ನಿರ್ಣಯಗಳು ಗ್ರಾಮೀಣ ಭಾಗಗಳಲ್ಲಿ ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳು ಮತ್ತು ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ (ಎಂಎಸ್​ಎಂಇ) ಅಭಿವೃದ್ಧಿ ಹಾಗೂ ಸುಸ್ಥಿರತೆ ಮೇಲೆ ಪರಿಣಾಮ ಬೀರಲಿವೆ. ಈ ನೀತಿಯ ಉದ್ದೇಶ ಸೂಕ್ತವಾಗಿ ಅನುಷ್ಠಾನಗೊಂಡರೆ ವಿಶೇಷವಾಗಿ ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಆರ್ಥಿಕತೆ ಮೇಲೆ ಅಗಾಧ ಪರಿಣಾಮ ಬೀರಲಿದೆ.

ಸದ್ಬಳಕೆ: ಸ್ವಾವಲಂಬನೆಗೆ ನೀಡಿರುವ ಕರೆ ನಾವು ನಮ್ಮ ಪ್ರಾಕೃತಿಕ, ಮಾನವ ಹಾಗೂ ತಂತ್ರಜ್ಞಾನ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡುತ್ತಿದ್ದೇವೆಯೋ ಇಲ್ಲವೋ ಎನ್ನುವುದರ ಬಗ್ಗೆ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಮಾಡಿದೆ. ನಮ್ಮ ದೇಶದಲ್ಲಿ ಅಪಾರ ಪ್ರಕೃತಿ ಸಂಪತ್ತಿದೆ. ದೊಡ್ಡ ಸಂಖ್ಯೆಯ ಜನ-ಸಂಪತ್ತಿದೆ. ಮೂರನೇ ಎರಡರಷ್ಟು ಜನಸಂಖ್ಯೆ 35 ವರ್ಷ ಒಳಗಿನವರು ಎನ್ನುವುದು ಒಂದು ಅನುಕೂಲಕರ ಅಂಶ. ದಣಿವರಿಯದೆ ದುಡಿದು ಆಹಾರ ಖಾತರಿ ಒದಗಿಸುವ ರೈತ ಸಮೂಹವಿದೆ. ಜಾಗತಿಕ ಗುಣಮಟ್ಟದ ಸಂಸ್ಥೆಗಳನ್ನು ರೂಪಿಸುವ ಸಮರ್ಥ ಕೈಗಾರಿಕೋದ್ಯಮಿಗಳಿದ್ದಾರೆ.

ನವಭಾರತ ಕಟ್ಟಲು ಈ ಎಲ್ಲ ಅಂಶಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ. ಸರಕು ಮತ್ತು ಸೇವೆಯ ದೇಶೀಯ ಬೇಡಿಕೆ ಪೂರೈಸುವುದು ಮಾತ್ರವಲ್ಲದೆ ಇದು ವಿಶೇಷವಾಗಿ ಭಾರತದ್ದೆಂದು ಜಗತ್ತೇ ಗುರುತಿಸುವಂಥ ಬ್ರಾಂಡ್ ಸೃಷ್ಟಿಸುವುದು ಅಗತ್ಯವಾಗಿದೆ.

ಯಶಸ್ಸಿನ ಎಲ್ಲ ಅಂಶಗಳು ನಮ್ಮಲ್ಲಿವೆ. ನಾನಾ ಕ್ಷೇತ್ರಗಳಲ್ಲಿ ಜಾಗತಿಕ ಬ್ರಾಂಡ್ ಸೃಷ್ಟಿಸಿದ ದಿಗ್ಗಜರಿದ್ದಾರೆ. ಉದಾಹರಣೆಗೆ, 20 ವರ್ಷಗಳ ಹಿಂದೆ ರಿಲಯನ್ಸ್ ಸಂಸ್ಥೆ ಜಗತ್ತಿನ ಅತಿದೊಡ್ಡ ರಿಫೈನರಿಯನ್ನು (ತೈಲಾಗಾರ) ದಾಖಲೆ 36 ತಿಂಗಳಲ್ಲಿ ಆರಂಭಿಸಿತ್ತು. ಬಜಾಜ್ ಆಟೋ ಜಗತ್ತಿನ ನಾಲ್ಕನೆ ಅತಿ ದೊಡ್ಡ ತ್ರಿಚಕ್ರ ಹಾಗೂ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯೆಂದು ಖ್ಯಾತಿ ಗಳಿಸಿತ್ತು. ಅಜೀಂ ಪ್ರೇಮ್ ದೇಶದ ಪ್ರಮುಖ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿದ್ದು ಮಾತ್ರವಲ್ಲ ಏಷ್ಯಾದ ಅತಿ ಉದಾರಿ ದಾನಿ ಎಂದೂ ಖ್ಯಾತರಾಗಿದ್ದಾರೆ. ಹಿಂದುಸ್ತಾನ್ ಯುನಿಲಿವರ್, ಲಾರ್ಸನ್ ಅಂಡ್ ಟೂಬ್ರೊ, ಭಾರತಿ ಏರ್​ಟೆಲ್, ಸನ್ ಫಾರ್ವಸ್ಯುಟಿಕಲ್ಸ್, ಮಾರುತಿ -ಜಗತ್ತಿನ ಟಾಪ್ 100 ಆವಿಷ್ಕಾರಕ ಕಂಪನಿಗಳಲ್ಲಿ ಸೇರಿವೆ ಎಂದು 2018ರಲ್ಲಿ ಫೋರ್ಬ್ಸ್ ಪಟ್ಟಿ ಮಾಡಿದೆ. 2019ರ ಟಾಪ್ 125 ಪಟ್ಟಿಯಲ್ಲಿ ಇನ್ಪೋಸಿಸ್, ಟಿಸಿಎಸ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಸೇರಿವೆ. ಪ್ರಿಯಾ ಫುಡ್ಸ್, ಪತಂಜಲಿ ಆಯುರ್ವೆದ, ಹಲ್ದಿರಾಮ್್ಸ, ಐಟಿಸಿ ಮೊದಲಾದವು ವಿವಿಧ ಕ್ಷೇತ್ರಗಳಲ್ಲಿ ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಕಂಪನಿ/ಬ್ರಾಂಡ್​ಗಳಾಗಿವೆ.

ಆಮದು ಅವಲಂಬನೆ ಕಡಿಮೆ: ಆತ್ಮನಿರ್ಭರ ಭಾರತ ಮಿಷನ್ ಕಚ್ಚಾ ಎಣ್ಣೆಯಿಂದ ಹಿಡಿದು ಬೃಹತ್ ಯಂತ್ರಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಕ್ರಮೇಣವಾಗಿ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅವಕಾಶ ಕಲ್ಪಿಸಲಿದೆ.

ನಮ್ಮ ಯುವಜನರಿಗೆ ಗುಣಮಟ್ಟದ ತಾಂತ್ರಿಕ ಹಾಗೂ ವೃತ್ತಿಪರ ತರಬೇತಿ ನೀಡಿದರೆ ನಮ್ಮ ಅಗಾಧ ಜನಸಂಖ್ಯೆಯನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದಾಗಿದೆ. ವ್ಯವಹಾರದ ಆರಂಭದ ನಿಯಮಾವಳಿಗಳನ್ನು ಸರಳಗೊಳಿಸಿದರೆ, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು ನೀಡಿದರೆ ಈ ಅಭಿಯಾನವು ಉದ್ದೇಶಿತ ಗುರಿಯನ್ನು ಅಗಾಧ ಪ್ರಮಾಣದಲ್ಲಿ ಸಾಧಿಸಬಲ್ಲದು.

ಜನಕೇಂದ್ರಿತ: ಯಾವುದೇ ಅಭಿಯಾನವು ಜನ-ಕೇಂದ್ರಿತವಾಗಿರಬೇಕು. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಕೊಡುವ ಹಾಗೂ ಅವುಗಳನ್ನು ಉತ್ತೇಜಿಸುವ ಮನೋಭಾವವನ್ನು ಜನರು ಬೆಳೆಸಿಕೊಳ್ಳಬೇಕು. ಒಮ್ಮೆ ಬೇಡಿಕೆ ಕುದುರಿ ಮಾರುಕಟ್ಟೆ ವಿಸ್ತಾರವಾದರೆ ಉತ್ಪಾದನೆ ಪ್ರಕ್ರಿಯೆಯ ಓಘ ಹೆಚ್ಚುತ್ತದೆ. ಅದರ ಬ್ರಾಂಡ್ ಮೌಲ್ಯ ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಅಭಿವೃದ್ಧಿ ಹೊಂದುತ್ತದೆ. ‘ಸ್ಥಳೀಯ’ ಸರಕುಗಳಿಗೆ ಒತ್ತು ನೀಡಿದರೆ ಅದು ಸ್ವಾವಲಂಬಿ ಭಾರತದತ್ತ ದೊಡ್ಡ ಹೆಜ್ಜೆಯಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನ ಪರಿಚಯಿಸಲು ನೆರವಾಗುತ್ತದೆ. ‘ಲೋಕಲ್’ (ಸ್ಥಳೀಯ) ಭಾರತವನ್ನು ‘ಗ್ಲೋಕಲ್’ (ಜಾಗತಿಕ) ಭಾರತ ಮಾಡುವ ಕನಸಿನ ಬೆನ್ನೇರಲು ನೆರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net