

ಚಿಕ್ಕಬಳ್ಳಾಪುರ: ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಪ್ರತಿಷ್ಠಾಪಿಸಿರುವ ಗಂಗಮ್ಮ ದೇವಿಯ ವಿಗ್ರಹದ ಮೇಲೆ ಕಾಲುಗಳನ್ನಿಟ್ಟುಕೊಂಡು ಅನುಚಿತವಾಗಿ ವರ್ತಿಸಿರುವ ಪ್ರವಾಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆಗೆ ಮನವಿ ಪತ್ರ ಸಲ್ಲಿಸಿದ ಸಮಿತಿ, ಸಾರ್ವಜನಿಕ ಸ್ಥಳಗಳಲ್ಲಿ ದೇವರ ವಿಗ್ರಹಗಳಿಗೆ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ಒತ್ತಾಯಿಸಿತು.
ಶ್ರೀನಿವಾಸ ಸಾಗರ ಬಳಿ ಇರುವ ತಾಯಿ ದೇವಿ ಗಂಗಮ್ಮ ವಿಗ್ರಹದ ಮೇಲೆ ಅನ್ಯ ಧರ್ಮೀಯರು ವಿಗ್ರಹದ ಮೇಲೆ ಕಾಲುಗಳನ್ನು ಇಟ್ಟು ಅನುಚಿತವಾಗಿ ವರ್ತನೆ ಮಾಡುತ್ತಿರುವ ಪ್ರವಾಸಿಗರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಒತ್ತಾಯಿಸಿದರು.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮಾತನಾಡಿ, ಪ್ರತಿಯೊಬ್ಬರು ಸಹ ಧಾರ್ಮಿಕ ಸೂಕ್ಷ್ಮ ಭಾವನೆಗಳನ್ನು ಗೌರವಿಸಬೇಕೇ ಹೊರತು ಧಕ್ಕೆಯಾಗಬಾರದು. ಪರಸ್ಪರ ಸಭ್ಯತೆಯ ಮೂಲಕ ಸೌಹಾರ್ದ ವಾತಾವರಣವನ್ನು ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಎಂ.ರಾಮಲಿಂಗಪ್ಪ, ಡಾ. ಬಿ.ವಿ.ಮಂಜುನಾಥ್, ಪೋಶೆಟ್ಟಹಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಶೋಕ್, ಮಾಧ್ಯಮ ಸಂಚಾಲಕ ವಿ.ಮಧುಚಂದ್ರ, ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಗೌರಿಶಂಕರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಬಾಲಕೃಷ್ಣ ಮತ್ತಿತರರು ಇದ್ದರು.