

ಬ್ರಾಸಿಲಿಯಾ: ಪ್ರವಾಸದ ಒಂದು ಭಾಗವಾಗಿ ಎದುರಾಗುವ ಅದ್ಭುತ ಹಾಗೂ ಅಪಾಯಕಾರಿ ತಾಣಗಳು ಒಂದು ರೀತಿ ಸಾಹಸ ಮತ್ತು ಥ್ರಿಲ್ಲರ್ ಅನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಅಂತಹ ಸ್ಥಳಗಳಲ್ಲಿ ಒಂದು ಫೋಟೋ ತೆಗೆದುಕೊಳ್ಳುವುದನ್ನು ಯಾರು ಮಿಸ್ ಮಾಡಿಕೊಳ್ಳುವುದೇ ಇಲ್ಲ. ಕಷ್ಟವಾದರೂ ಸರಿಯೇ ಒಂದು ಫೋಟೋ ತೆಗೆದೇ ಬಿಡಬೇಕೆಂಬ ಹುಚ್ಚು ಧೈರ್ಯ ಕೆಲವೊಮ್ಮೆ ಅನಾಹುತಕ್ಕೆ ಎಡೆಮಾಡಿಕೊಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ.
ಅಂದಹಾಗೆ ಬ್ರೆಜಿಲ್ನ ರಿಯೊಡಿ ಜನೈರೋದಲ್ಲಿ ಪ್ರವಾಸಿಗರೊಬ್ಬರು ಒಂದು ಒಳ್ಳೆಯ ಪೋಟೋಗಾಗಿ ಎದೆ ಝಲ್ ಎನಿಸುವ ಪ್ರದೇಶದಲ್ಲಿ ಸಾಹಸಕ್ಕೆ ಕೈಹಾಕಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಏದುಸಿರು ಬಿಡುವಂತೆ ಮಾಡಿದೆ.
ಅನೇಕ ಟ್ವಿಟರ್ ಬಳಕೆದಾರರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಅನಾಮಿಕ ಮಹಿಳೆಯೊಬ್ಬಳು ರಿಯಾಡಿ ಜನೈರೋ ಸಮೀಪದ ತಿಜುಕಾ ಅರಣ್ಯ ವ್ಯಾಪ್ತಿಯಲ್ಲಿ ಬರುವ ಸುಮಾರು 3 ಸಾವಿರ ಅಡಿ ಎತ್ತರದ ಪೆದ್ರಾ ಡಾ ಗಾವಿಯಾ ಪರ್ವತದಲ್ಲಿ ಫೋಟೋಗಾಗಿ ಪೋಸ್ ನೀಡಿದ ಭಯಾನಕ ದೃಶ್ಯವಿದೆ. ಹೃದಯ ದುರ್ಬಲ ಇರುವವರಂತೂ ವಿಡಿಯೋ ನೋಡದಿರುವುದೇ ಒಳಿತು ಎನ್ನವಷ್ಟು ಭಯಾನಕವಾಗಿದೆ.
ಪವರ್ತದ ತುತ್ತ ತುದಿಯಲ್ಲಿ ಅನೇಕ ಬಾರಿ ನುಣುಪಾದ ಬಂಡೆಯ ಕೆಳಗೆ ಜಾರಿ ಫೋಟೋಗೆ ಫೋಸ್ ನೀಡಿರುವುದು ಎದೆ ಝಲ್ ಎನಿಸುವಂತಿದೆ. ಅಲ್ಲಿಂದ ಕೆಳಗೆ ನೋಡಿದರೆ, ಸುಂದರವಾದ ಸರೋವರ ಜತೆಗೆ ಪಟ್ಟಣವೊಂದು ಅಂಗೈನಲ್ಲಿ ಹಿಡಿಯಬಹುದಾದಷ್ಟು ಚಿಕ್ಕದಾಗಿ ಕಾಣುವಷ್ಟು ಪವರ್ತ ಎತ್ತರವಾಗಿದೆ. ಹಾಗೇ ಅಪಾಯಕಾರಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿ ಕೆಳಗೆ ಬಿದ್ದರೂ ಮೂಳೆಗಳು ಪುಡಿಯಾಗುವುದಂತೂ ಗ್ಯಾರೆಂಟಿ ಎನ್ನುವಷ್ಟು ಆಳವಿದೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ದಿನದಿಂದ ಈವರೆಗೂ 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 13.2 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರಲ್ಲಿ ಅನೇಕರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದು, ಆ ಮಹಿಳೆಯ ತುದಿಯಲ್ಲಿ ಇರುವುದನ್ನು ನೋಡಿದರೆ ನಮ್ಮ ಕಾಲಿಗೆ ಚಾಕು ತೆಗೆದುಕೊಂಡು ತಿವಿದಂಗೆ ಆಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್)