7 ಕೋಟಿ ರೂ. ಬಂಡವಾಳ! ಲಾಭದಲ್ಲಿ 'ಛಾವಾ' ಹಿಂದಿಕ್ಕಿ, ಹೊಸ ದಾಖಲೆ ಬರೆದ 'ಟೂರಿಸ್ಟ್​ ಫ್ಯಾಮಿಲಿ' | Tourist Family

ವಿಜಯವಾಣಿ (21)
Published on

Tourist Family: ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆಕಂಡು ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಟೂರಿಸ್ಟ್​ ಫ್ಯಾಮಿಲಿ ಚಿತ್ರ, ಗಳಿಕೆ ಮಾತ್ರವಲ್ಲದೇ ಸಿನಿರಸಿಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು. 2025ರಲ್ಲಿ ಭಾರತೀಯ ಚಲನಚಿತ್ರೋದ್ಯಮದಿಂದ ಹೊರಬಂದ ಸಿನಿಮಾಗಳ ಪೈಕಿ ಯಶಸ್ವಿಯಾದ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ವರ್ಷದ ಮೊದಲಾರ್ಧದಲ್ಲಿ ಅಬ್ಬರಿಸಿದ ಚಿತ್ರಗಳಲ್ಲಿ ತಮಿಳು ಚಿತ್ರ 'ಟೂರಿಸ್ಟ್​ ಫ್ಯಾಮಿಲಿ' ಇದೀಗ ಹೊಸ ಮೈಲಿಗಲ್ಲು ಸಾಧಿಸಿದೆ.

ಛಾವಾ ಸ್ಥಾನ 'ಟೂರಿಸ್ಟ್​'ಗೆ

ನೂರಾರು ಕೋಟಿ ರೂ. ಬಂಡವಾಳ ಹಾಕಿ ನಿರ್ಮಿಸಿದ ಚಿತ್ರಗಳೇ ಹಿಟ್​ ಆಗುವಲ್ಲಿ ಎಡವಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸುವಲ್ಲಿಯೂ ವಿಫಲವಾಗಿದೆ. ಒಂದಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಸೋಲು ಕಂಡರೂ ಒಟಿಟಿಯಲ್ಲಿ ಉತ್ತಮ ಗಳಿಕೆ ಹಾಗೂ ವಿಮರ್ಶೆ ಪಡೆದಿವೆ. ಈ ವರ್ಷದಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಭಾರತೀಯ ಸಿನಿಮಾಗಳ ಪೈಕಿ ಬಾಲಿವುಡ್​ನ ಛಾವಾ ಮೊದಲಿಗಿತ್ತು. ಆದರೀಗ ಆ ಚಿತ್ರವನ್ನು ಟೂರಿಸ್ಟ್​ ಫ್ಯಾಮಿಲಿ ಹಿಂದಿಕ್ಕಿದೆ.

ತನ್ನ ಬಜೆಟ್‌ಗಿಂತ ಅಧಿಕ ಲಾಭ ಗಳಿಸಿದ ಅಭಿಶನ್ ಜೀವಿನಾಥ್ ನಿರ್ದೇಶನದ ಟೂರಿಸ್ಟ್ ಫ್ಯಾಮಿಲಿ ಕೇವಲ 7 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಸಿನಿಮಾ. ಈ ಚಿತ್ರವು ಆರಂಭದಲ್ಲಿ ಜಾಗತಿಕವಾಗಿ 90 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಕಂಡಿತು. ಇತರ ಭಾಷೆಗಳಲ್ಲಿ ಹೆಚ್ಚಿನ ಪ್ರಚಾರ ಸಿಗದಿದ್ದರೂ ಸುಲಭವಾಗಿ 100 ಕೋಟಿ ರೂ. ಲಾಭ ಕೂಡ ನೋಡಿತು. 2025ರಲ್ಲಿ ಶೇ. 1200ರಷ್ಟು ಗಳಿಕೆ ಕಂಡ ಬ್ಲಾಕ್​​ಬಸ್ಟರ್​ ಸಿನಿಮಾ ಇದಾಗಿದ್ದು, 2025ರಲ್ಲಿ ಅತೀ ಹೆಚ್ಚು ಲಾಭ ನೋಡಿದ ಚಿತ್ರ ಎಂಬ ಪಟ್ಟಿಗೆ ಸೇರಿದೆ. ಕೇವಲ ಭಾರತದಲ್ಲಿಯೇ 62 ಕೋಟಿ ರೂ. ಗಳಿಸಿದೆ.

ಈ ಪಟ್ಟಿಯಲ್ಲಿ ಟೂರಿಸ್ಟ್ ಫ್ಯಾಮಿಲಿ ಅಗ್ರಸ್ಥಾನಕ್ಕೇರಿದರೆ, ಹಿಂದಿ ಸಿನಿಮಾ ಛಾವಾ ಶೇ.800ರಷ್ಟು ಲಾಭ ಗಳಿಸಿದೆ. ಈ ಚಿತ್ರವು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿ, 800 ಕೋಟಿ ರೂ. ಒಟ್ಟಾರೆ ಕಲೆಕ್ಷನ್ ಮಾಡಿದೆ. ಇವೆಲ್ಲವೂ ಥಿಯೇಟರ್ ಕಲೆಕ್ಷನ್ ಮತ್ತು ಚಲನಚಿತ್ರ ಬಜೆಟ್ ಆಧರಿಸಿ ಗಳಿಸಿದ ಲಾಭಗಳು ಮಾತ್ರ. 2025ರ ದ್ವಿತೀಯಾರ್ಧ ಈಗಷ್ಟೇ ಶುರುವಾಗಿದ್ದು, ಮುಂಬರುವ ಪ್ಯಾನ್ ಇಂಡಿಯಾ ಚಿತ್ರಗಳು ಯಾವ ರೀತಿ ಸದ್ದು ಮಾಡಲಿದೆ? ಏನ್ನೆಲ್ಲ ದಾಖಲೆಗಳು ಬರೆಯಲಿದೆ? ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net