

ಬೆಂಗಳೂರು: ‘ಅರ್ಧ ಸತ್ಯ ಎನ್ನುವುದು ಪೂರ್ತಿ ಸುಳ್ಳಿಗಿಂತ ಮಹಾಘಾತುಕ’ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿಯ ಮಾಜಿ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್ ಪರೋಕ್ಷವಾಗಿ ಕುಟುಕಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿದ್ದಾರೆ. ‘ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಮಾಡುತ್ತಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರವಾದ ಆರೋಪ ಮಾಡಿ, ಎರಡು ಬಣಗಳ ನಡುವಿನ ಸಂಘರ್ಷವೇ ಇದಕ್ಕೆ ಕಾರಣವೆಂದೂ ವಿಶ್ಲೇಷಿಸಿದ್ದಾರೆ.
ಹೀಗೆ ವಿಶ್ಲೇಷಿಸುವ ಭರದಲ್ಲಿ ಇಬ್ಬರು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಅವರು ಆರ್‌ಎಸ್‌ಎಸ್/ ಬಿಜೆಪಿ ನಂಟು ಹೊಂದಿದ್ದರು ಎಂದು ಬೆಳಕು ಚೆಲ್ಲಿದ್ದಾರೆ. ಮಹೇಶ್ ತಿಮರೋಡಿ ಸಂಘದ ಸಂಪರ್ಕ ಇಟ್ಟುಕೊಂಡಿದ್ದಾರೆಂಬುದು ನಿಜ. ಗಿರೀಶ್ ಮಟ್ಟಣ್ಣನವರ್ ಬಿಜೆಪಿಯ ಕಾರ್ಯಕರ್ತರಾಗಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂಬುದೂ ನಿಜ.
ಆದರೆ ಅವರು ನಮ್ಮ ಪರಿವಾರದಿಮದ ದೂರ ಸರಿದು ಬಹಳ ಕಾಲವಾಗಿದೆ ಎಂಬುದೂ ಅಷ್ಟೇ ಸತ್ಯ. ನಮ್ಮಿಂದ ದೂರವಾದ ಮೇಲೆ ಅವರಿಗೆ ಆಡಳಿತ ಪಕ್ಷದ ಯಾರ‌್ಯಾರ ಮಾರ್ಗದರ್ಶನ, ಕುಮ್ಮಕ್ಕು ಸಿಕ್ಕಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈಗ ರಾಜ್ಯ ಸರ್ಕಾರದ ಉದ್ದೇಶವೆಂದರೆ, ಇವರಿಬ್ಬರ ಪೂರ್ವ ಪರಿಚಯವನ್ನು ಹೇಳಿ, ಬೇರೆಯವರ ಮೇಲೆ ಗೂಬೆ ಕೂರಿಸಿ ಕೈ ತೊಳೆಯುವುದೋ ? ಅಥವಾ ಇವರ ನಿಜವಾದ ಮಾರ್ಗದರ್ಶಕರಾಗಿ ಹಿಂದೆ ಇರುವ ಆಡಳಿತ ಪಕ್ಷದ ‘ಥಿಂಕ್ ಟ್ಯಾಂಕ್’ನ ಅಪಾಯಕಾರಿ ಮೇಧಾವಿಗಳನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವುದೋ ? ಎಂದು ಕೇಳಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಹೇಳಿರುವ ಈ ಒಟ್ಟು ವಿದ್ಯಮಾನದ ಹಿಂದೆ ಇರುವ ‘ಷಡ್ಯಂತ್ರ’ದಲ್ಲಿ ಪ್ರಿಯಾಂಕ್ ಖರ್ಗೆಯವರ ಪಕ್ಷದ ಪಡಸಾಲೆಯ ಚಿಂತಕರು ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆಂದು ಎಸ್.ಸುರೇಶ್‌ಕುಮಾರ್ ತಿವಿದಿದ್ದಾರೆ.