ಉನ್ನತ ಪೊಲೀಸ್ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

police
Published on

ಚೆನ್ನೈ: ತಮಿಳುನಾಡಿನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಉನ್ನತ ಹುದ್ದೆಯಲ್ಲಿರುವ ಪುರುಷ ಸಹೋದ್ಯೋಗಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪ ಮಾಡಿದ್ದಾರೆ. ಈ ದುಷ್ಕೃತ್ಯವು ಇತ್ತೀಚೆಗೆ ಮುಖ್ಯ ಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ನಡೆಸಿದ ಜಿಲ್ಲಾವಾರು ಪ್ರವಾಸದ ವೇಳೆಯಲ್ಲಿ ನಡೆದಿದೆ ಎನ್ನಲಾಗಿದೆ.

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವವರು ಚೆನ್ನೈನ ಸ್ಪೆಷಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಲಾ ಅಂಡ್ ಆರ್ಡರ್) ಆದ ರಾಜೇಶ್ ದಾಸ್. ಈ ಆರೋಪದ ಹಿನ್ನೆಲೆಯಲ್ಲಿ ದಾಸ್​ ಅವರನ್ನು ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯ ಸುರಕ್ಷತಾ ವ್ಯವಸ್ಥೆ ಕುರಿತಾದ ಸಭೆಗಳಿಂದ ಹೊರಗಿರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪದ ವಿಚಾರಣೆ ನಡೆಸಲು ವಿಶಾಖಾ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಆರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಯಶ್ರೀ ರಘುನಂದನ್ ಅವರ ನೇತೃತ್ವದಲ್ಲಿ ಈ ಸಮಿತಿ ತನಿಖೆ ನಡೆಸಲಿದೆ ಎಂದು ಗೃಹ ಇಲಾಖೆಯ ಆದೇಶ ತಿಳಿಸಿದೆ.

ವಿರೋಧ ಪಕ್ಷದ ನಾಯಕ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಎಐಎಎಂಕೆ ಸರ್ಕಾರವು ಇಂಥ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೆಲವೇ ವಾರಗಳಲ್ಲಿ ಬರಲಿರುವ ತಮಿಳುನಾಡು ಮತ್ತು ಪುದುಚೇರಿಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net