ಭಾರತೀಯ ಮೂಲದ, ಜಗತ್ಪ್ರಸಿದ್ಧ ಶೆಫ್​ ಫ್ಲಾಯ್ಡ್​ ಕಾರ್ಡೋಜ್​ ಕರೊನಾ ವೈರಸ್​ನಿಂದ ಸಾವು; ಮಾ.8ರಂದು ಮುಂಬೈನಿಂದ ನ್ಯೂಯಾರ್ಕ್​ಗೆ ಹೋಗಿದ್ದರು...!

Chef 26 March 20
Published on

ನ್ಯೂಯಾರ್ಕ್​: ಮುಂಬೈ ಮೂಲದ, ವಿಶ್ವಪ್ರಸಿದ್ಧ ಶೆಫ್​ ಫ್ಲಾಯ್ಡ್​ ಕಾರ್ಡೋಜ್​ ಅವರು ನ್ಯೂ ಜೆರ್ಸಿಯಲ್ಲಿ ಕರೊನಾ ವೈರಸ್​ನಿಂದ ಮೃತಪಟ್ಟಿದ್ದಾರೆ.

59 ವರ್ಷದ ಫ್ಲಾಯ್ಡ್​ ಮಾ.8ರಂದು ಮುಂಬೈನಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ ನ್ಯೂಯಾರ್ಕ್​ಗೆ ತೆರಳಿದ್ದರು. ಜ್ವರದಿಂದ ಬಳಲುತ್ತಿದ್ದ ಅವರಿಗೆ ನ್ಯೂಜೆರ್ಸಿಯ ಮಾಂಟ್​ಕ್ಲೇರ್​​ನಲ್ಲಿರುವ ಮೌಂಟೇನ್​ಸೈಡ್​ ಮೆಡಿಕಲ್​ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅದು ಸಾಮನ್ಯ ಜ್ವರವಲ್ಲ, ಬದಲಿಗೆ ಮಹಾಮಾರಿ ಕರೊನಾ ವೈರಸ್​ ಎಂಬುದು ಮಾರ್ಚ್​ 18ರಂದು ದೃಢಪಟ್ಟಿತ್ತು. ಅಂದಿನಿಂದಲೂ ಚಿಕಿತ್ಸೆ ಪಡೆಯುತ್ತಿದ್ದ ಫ್ಲಾಯ್ಡ್​ ಮಾ.25ರಂದು ಮೃತಪಟ್ಟಿದ್ದಾರೆ.

ಅಮೆರಿಕದ ರಿಯಾಲಿಟಿ ಶೋ ಆಗಿರುವ ಅಡುಗೆ ಸ್ಪರ್ಧೆ ಕಾರ್ಯಕ್ರಮ ಟಾಪ್​ಶೆಫ್​ ಮಾಸ್ಟರ್ಸ್​​ನಲ್ಲಿ ಭಾಗವಹಿಸಿ, ಗೆದ್ದು ಟಾಪ್​ ಶೆಫ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಂಬೈ ಹಾಗೂ ಅಮೆರಿಕ ಎರಡೂ ಕಡೆಗಳಲ್ಲಿ ಇವರ ಮಾಲೀಕತ್ವದ ರೆಸ್ಟೋರೆಂಟ್​ಗಳಿವೆ. ಓ ಪೆಡ್ರಾ, ಬಾಂಬೆ ಸ್ವೀಟ್ ಶಾಪ್​, ಒ ಪೆಡ್ರೊ ಮತ್ತು ಬಾಂಬೆ ಕ್ಯಾಂಟೀನ್​ನ ಪಾಲುದಾರರಾಗಿದ್ದಾರೆ.

ಮಾರ್ಚ್​ 18ರಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿಕೊಂಡಿದ್ದ ಅವರು, ಜ್ವರದಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಅವರ ಸಾವಿಗೆ ಇಡೀ ಶೆಫ್​ ಜಗತ್ತು ಕಂಬನಿ ಮಿಡಿದಿದೆ.

ಫ್ಲಾಯ್ಡ್​ ಕಾರ್ಡೋಜ್​ ಅವರು ನಾವೆಲ್ಲ ಹೆಮ್ಮೆ ಪಡುವಂತಹ ಸಾಧನೆ ಮಾಡಿದವರು. ಸದಾ ವಿನೋದ ಮಾಡುತ್ತ, ನಗುತ್ತ, ಉಳಿದವರನ್ನೂ ನಗಿಸುತ್ತ ಇರುತ್ತಿದ್ದರು. ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟ ಎಂದು ಪ್ರಸಿದ್ಧ ಶೆಫ್​ ಪದ್ಮಾ ಲಕ್ಷ್ಮೀ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net