

ನವದೆಹಲಿ: ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಗ್ರೆಟಾ ಥನ್ಬರ್ಗ್ಳ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಿದ ನಂತರ ಇದೀಗ ಇನ್ನಿಬ್ಬರಿಗೆ ವಾರಂಟ್ ನೀಡಲಾಗಿದೆ. ನಿಕಿತಾ ಜೇಕಬ್ ಹೆಸರಿನ ವಕೀಲೆಯೂ ಟೂಲ್ಕಿಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಲಾಗಿದೆ.
ವಕೀಲೆ ನಿಕಿತಾ ಜೇಕಬ್ ಮತ್ತು ಶಾಂತನು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಟೂಲ್ಕಿಟ್ ಹಿಂದೆ 'ಪಾಯಿಂಟ್ ಫಾರ್ ಜಸ್ಟೀಸ್' ಹೆಸರಿನ ಸಂಘಟನೆ ಇರುವುದು ಪತ್ತೆಯಾಗಿದೆ. ಈ ಸಂಘಟನೆಯು ಟೂಲ್ಕಿಟ್ ಬಿಡುಗಡೆಗೂ ಮೊದಲು ನಿಕಿತಾಳನ್ನು ಸಂಪರ್ಕಿಸಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಸಂಘಟನೆಯ ಮುಖ್ಯಸ್ಥ ಎಂ.ಒ. ದಲಿವಾಲ್, ನಿಕಿತಾ, ದಿಶಾ ರವಿ ಹಾಗೂ ಅನೇಕರು ಜೂಮ್ ಕಾಲ್ ಮೂಲಕ ಸಭೆ ನಡೆಸಿ, ಚರ್ಚಿಸಿದ್ದರು. ಅದೇ ವೇದಿಕೆಯಲ್ಲಿ ಸಂಪೂರ್ಣ ಯೋಜನೆಯನ್ನು ಸಿದ್ಧ ಮಾಡಲಾಗಿತ್ತು. ಹೇಗೆ ಮಾಡಿದರೆ ಪ್ರತಿಭಟನೆ ಇನ್ನಷ್ಟು ತೀವ್ರವಾಗುತ್ತದೆ? ಹೋರಾಟಗಾರರಿಗೆ ಯಾವ ರೀತಿಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡಬಹುದು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಗ್ರೆಟಾ ಈ ಟೂಲ್ಕಿಟ್ನ್ನು ಟ್ವೀಟ್ ಮಾಡುತ್ತಿದ್ದಂತೆಯೇ ಈ ಸಂಘಟನೆ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಟೂಲ್ಕಿಟ್ ಬಿಡುಗಡೆಯಾದಾಕ್ಷಣವೇ ನಿಕಿತಾ ತನ್ನ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾಳೆ. ಇದೀಗ ಆಕೆ ನಾಪತ್ತೆಯಾಗಿರುವುದಾಗಿಯೂ ತಿಳಿಸಲಾಗಿದೆ. (ಏಜೆನ್ಸೀಸ್)