

ಶಿವಮೊಗ್ಗ: ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್‌ನ 14ನೇ ವಾರ್ಷಿಕೋತ್ಸವ, ಅಭಿನಂದನೆ, ಸನ್ಮಾನ, ಪ್ರಶಸ್ತಿ ಪ್ರದಾನ, ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಆ.25ರ ಬೆಳಗ್ಗೆ 10.30ಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಕೆ.ಜೆ.ಪ್ರಶಾಂತ್ ಶಾಸ್ತ್ರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಭಿರುಚಿ, ಭಾರತೀಯ ವಿಚಾರ ವೇದಿಕೆ, ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್, ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ, ರೋಟರಿ ರಕ್ತ ನಿಧಿ, ಸೀಗೆಹಟ್ಟಿ ಅಂಬಾಭವನಿ ಸೇವಾ ಸಂಘ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿವೆ ಎಂದರು.
ಇದು ನಮ್ಮ ಟ್ರಸ್ಟ್‌ನ 101ನೇ ಕಾರ್ಯಕ್ರಮ. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಸುರೇಶ್ ದುರ್ಗಪ್ಪ, ಮಿಡ್ ಟೌನ್ ರೋಟರಿ ಚಾರಿಟಿ ಫೌಂಡೇಷನ್‌ನ ಶಿವಪ್ರಸಾದ್ ಟಿ.ಪಟೇಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಎನ್.ಗೋಪಿನಾಥ್, ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ದೇವು( ಎಚ್.ಸತೀಶ್), ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆಟೋ ಕಾಂಪ್ಲೆಕ್ಸ್ ಅಸೋಸಿಯನ್ ಅಧ್ಯಕ್ಷ ಸುರೇಶ್ ಮಾತನಾಡಿ, ಕೆ.ಜೆ.ಪ್ರಶಾಂತ್ ಶಾಸ್ತ್ರಿ 101 ಬಾರಿ ರಕ್ತದಾನ ಮಾಡಿದ್ದಾರೆ. ಆ.25ರ ಕಾರ್ಯಕ್ರಮದಲ್ಲಿ ಇವರಿಗೆ ಜೀವ ರಕ್ಷಕ್ ಬಿರುದಾವಳಿ ನೀಡಿ ಸನ್ಮಾನಿಸಲಾಗುವುದು. ಖಜಾಂಚಿ ಬಿ.ಆರ್.ಜಗದೀಶ್ ಅವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ ನೀಡಲಾಗುವುದು. ಕಿರುತೆರೆ ನಟಿ ಅಶ್ವಿನಿ ಆರ್.ಮೂರ್ತಿ ಅವರನ್ನು ಸನ್ಮಾನಿಸಲಾಗುವುದು. ಕಸ್ತೂರ ಬಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸ್ಪರ್ಷ ಜಿ.ಶರವಣ ಅವರನ್ನು ಅಭಿನಂದಿಸಲಾಗುವುದು ಎಂದರು.
ಪ್ರಮುಖರಾದ ಜಿ.ಎನ್. ಮೂರ್ತಿ, ಸಿಹಿಮೊಗೆ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.