

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆಗಳನ್ನು ನಾಶಪಡಿಸಿವೆ.
ಇತಿಹಾಸದಲ್ಲಿ ಒಮ್ಮೆಯೂ ಇತ್ತ ಬಾರದ ಆನೆಗಳು ಈ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ಬಂದಿವೆ. ಅಲ್ಲದೆ ಸಾಲ ಮಾಡಿ ಇದೇ ಮೊದಲ ವರ್ಷ ಬೆಳೆದಿದ್ದ ಬೆಳೆಗಳನ್ನು ತಿಂದುಹಾಕಿರುವುದರಿಂದ ರೈತರಿಗೆ ಲಕ್ಷಾಂತರ ರೂ. ಬೆಳೆನಷ್ಟವುಂಟಾಗಿದೆ.
ಬುಧವಾರ ರಾತ್ರಿ ಬೆಟ್ಟದ ಮಾದಹಳ್ಳಿ ಹಾಗೂ ಓಂಕಾರ್ ಅರಣ್ಯದ ನಡುವೆಯಿರುವ ತಾಲೂಕಿನ ರಾಘವಾಪುರ ಗ್ರಾಮದ ಕೆಂಪಮ್ಮ ಅವರ ಜಮೀನಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆಗಳನ್ನು ನಾಶಪಡಿಸಿವೆ. ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿರುವುದರಿಂದ ಮಾರಾಟಕ್ಕೆ ಕೊಂಡೊಯ್ಯಲು ಕೊಯ್ಲು ಮಾಡಿಸಿ ಕ್ರೇಟ್‌ಗಳಲ್ಲಿ ಸಂಗ್ರಹಿಸಿಡಲಾಗಿದ್ದನ್ನೂ ತುಳಿದುಹಾಕಿ ನಾಶ ಮಾಡಿ ದಾಂಧಲೆ ನಡೆಸಿವೆ. ಜಮೀನಿನಲ್ಲಿ ನಿರ್ಮಿಸಿದ್ದ ಶೆಡ್ ಅನ್ನು ಕಿತ್ತು ಹಾಕಿವೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾರೂ ಇಲ್ಲದಿರುವುದರಿಂದ ಪ್ರಾಣಾಪಾಯ ತಪ್ಪಿದೆ. ಅರಣ್ಯ ಇಲಾಖೆ ಬೆಳೆನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.