ಕೇರಳದಲ್ಲಿ ಮಕ್ಕಳಿಗೆ ಟೊಮ್ಯಾಟೊ ಜ್ವರದ ಕಾಟ: 80ಕ್ಕೂ ಪ್ರಕರಣಗಳು ಪತ್ತೆ, ಕರ್ನಾಟಕದ ಗಡಿಯಲ್ಲೂ ಕ್ರಮ..

Tomato Flu
Published on

ತಿರುವನಂತಪುರಂ: ವಿಷಪೂರಿತ ಆಹಾರ ಸೇವನೆಯಿಂದ 58 ಜನರ ಮರಣದ ಇತ್ತೀಚಿನ ಆಘಾತಕಾರಿ ಘಟನೆ ಬೆನ್ನಲೇ ಕೇರಳದ ಹಲವು ಭಾಗಗಳಲ್ಲಿ ನಿಗೂಢ ‘ಟೊಮ್ಯಾಟೊ ಜ್ವರ’ದ ಕಾಟ ಆರಂಭವಾಗಿದೆ. ರಾಜ್ಯದಲ್ಲಿ 80ಕ್ಕೂ ಹೆಚ್ಚು ಮಕ್ಕಳು ಟೊಮ್ಯಾಟೊ ಜ್ವರ ವ್ಯಾಧಿಯಿಂದ ಬಳಲುತ್ತಿದ್ದಾರೆ. ಬಹುತೇಕ ಪ್ರಕರಣಗಳು ಕೊಲ್ಲಂನಿಂದ ವರದಿಯಾಗಿದೆ. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಇದು ಕಾಡುತ್ತಿದ್ದು ವ್ಯಾಧಿಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ. ಅರ್ಯಂಕವು, ಅಂಚಲ್ ಮತ್ತು ನೆಡುವತೂರ್​ನಿಂದಲೂ ಕೆಲವು ಪ್ರಕರಣಗಳು ವರದಿಯಾಗಿವೆ.

ಎಚ್ಚರಿಕೆ: ಇದೊಂದು ವೈರಲ್ ಜ್ವರವೇ ಅಥವಾ ಚಿಕೂನ್​ಗುನ್ಯಾ ನಂತರದ ಪರಿಣಾಮವೇ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಕೇರಳದ ಕೆಲವು ಭಾಗಗಳಲ್ಲಿ ಮಾತ್ರವೇ ಈ ರೋಗ ಕಂಡು ಬಂದಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಇನ್ನಷ್ಟು ಹರಡಬಹುದು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

ಏನಿದು ಟೊಮ್ಯಾಟೊ ಜ್ವರ?: ಟೊಮ್ಯಾಟೊ ಫ್ಲೂ ಒಂದು ಅಪರೂಪದ ರೋಗವಾಗಿದ್ದು ಮೈಮೇಲೆ ಕೆಂಪು ಬಣ್ಣದ ದದ್ದು, ಚರ್ಮ ತುರಿಕೆ ಮತ್ತು ನಿರ್ಜಲೀಕರಣ (ಡಿಹೈಡ್ರೇಶನ್) ಉಂಟಾಗುತ್ತದೆ. ಗುಳ್ಳೆಗಳು ಟೊಮ್ಯಾಟೊದಂತೆ ಕಾಣುವುದರಿಂದ ಅದಕ್ಕೆ ಟೊಮ್ಯಾಟೊ ಜ್ವರ ಎಂದು ಹೆಸರಿಸಲಾಗಿದೆ.

ಲಕ್ಷಣಗಳು: ಮೈಮೇಲೆ ಕೆಂಪು ಬಣ್ಣದ ಗುಳ್ಳೆ, ತೀವ್ರ ಜ್ವರ, ಮೈಕೈ ನೋವು, ಸಂದಿ ಊತ, ಆಯಾಸ, ವಾಕರಿಕೆ, ಭೇದಿ, ಕೈ, ಮೊಣಕಾಲು ವಿವಿಧ ಬಣ್ಣಕ್ಕೆ ತಿರುಗುವುದು, ಕೆಮ್ಮು, ಸೀನುವುದು ಮತ್ತು ಮೂಗು ಸೋರಿಕೆ, ಬಹುತೇಕ ಚಿಕೂನ್​ಗುನ್ಯಾ ಲಕ್ಷಣಗಳು.

ತಡೆಯುವುದು ಹೇಗೆ?: ಮಕ್ಕಳಲ್ಲಿ ಜ್ವರದ ಯಾವುದೇ ಲಕ್ಷಣವಿದ್ದಲ್ಲಿ ತಕ್ಷಣವೇ ವೈದ್ಯರಿಗೆ ತೋರಿಸಲು ಸಲಹೆ ಮಾಡಲಾಗಿದೆ. ಮಗು ಮೈ ಮೇಲಿನ ಗುಳ್ಳೆಯನ್ನು ತುರಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕು. ಸರಿಯಾದ ವಿಶ್ರಾಂತಿ ಪಡೆಯಬೇಕು ಹಾಗೂ ದೇಹದಲ್ಲಿ ನೀರಿನ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಅಂಗನವಾಡಿ ಮಕ್ಕಳನ್ನು ಪರೀಕ್ಷಿಸಲು 24 ಸದಸ್ಯರ ತಂಡವೊಂದನ್ನು ಕೂಡ ರಚಿಸಲಾಗಿದೆ.

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಬೆಂಗಳೂರು: ಕೇರಳದಲ್ಲಿ ಪತ್ತೆಯಾಗಿರುವ ‘ಟೊಮ್ಯಾಟೊ ಫ್ಲೂ’ ರೋಗ ತಡೆಗೆ ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡುಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.

ಟೊಮ್ಯಾಟೊ ಜ್ವರಕ್ಕೂ ಕೋವಿಡ್​ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಕೇರಳದಲ್ಲಿ ಈಗಾಗಲೇ ಇರುವ ಎಂಡೆಮಿಕ್ ಕಾಯಿಲೆ ಆಗಿದೆ. ರೋಗ ಹರಡದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಆತಂಕ ಬೇಡ. | ಡಾ.ಕೆ. ಸುಧಾಕರ್ ಆರೋಗ್ಯ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net