ಟೊಮ್ಯಾಟೊ ಬಾಕ್ಸ್‌ಗೆ 3100 ರೂ.

Tomato_EPS
Published on

ಕೋಲಾರ: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಟೊಮ್ಯಾಟೊ 15 ಕೆಜಿ ಬಾಕ್ಸ್ ಒಂದರ ಬೆಲೆ 3100 ರೂ.ಗೆ ಹರಾಜಾಗುವ ಮೂಲಕ ತರಕಾರಿಗಳ ಬೆಲೆಯ ಪೈಕಿ ಸಾರ್ವಕಾಲಿಕ ದಾಖಲೆ ಮಾಡಿದೆ.

ಒಂದು ತಿಂಗಳಿಂದ ವಾತಾವರಣದಲ್ಲಿನ ವ್ಯತ್ಯಾಸ, ಮೋಡ ಕವಿದ ವಾತಾವರಣದಿಂದಾಗಿ ಟೊಮ್ಯಾಟೊ ಸೇರಿ ತರಕಾರಿ ಬೆಳೆಗಳು ಶಿಲೀಂಧ್ರ, ಬ್ಯಾಕ್ಟೀರಿಯಾಗೆ ತುತ್ತಾಗಿ ಇಳುವರಿ ತೀವ್ರ ಕುಸಿತ ಕಂಡಿದೆ. ಗಾಯದ ಮೇಲೆ ಬರೆ ಎಂಬಂತೆ ಕಳೆದ ವಾರವಿಡೀ ಜಿಲ್ಲಾದ್ಯಂತ ಸುರಿದ ವರ್ಷಧಾರೆಗೆ ಟೊಮ್ಯಾಟೊ ಇನ್ನಿತರ ತರಕಾರಿ ಬೆಳೆಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವುದರಿಂದ ಎಪಿಎಂಸಿಗೆ ತರಕಾರಿ ಆವಕ ಕಡಿಮೆ ಆಗಿ ಬೆಲೆಗಳು ಗಗನಕ್ಕೇರಿವೆ.

ಕಳೆದ ವಾರ 15 ಕೆಜಿ ಬಾಕ್ಸ್ 2000 ರೂ.ಗೆ ಹರಾಜು ಕಂಡು ದಾಖಲೆ ಬರೆದಿತ್ತು. ಮಂಗಳವಾರ 7468 ಕ್ವಿಂಟಾಲ್ ಟೊಮ್ಯಾಟೊ ಆವಕ ಆಗಿತ್ತು. ಕನಿಷ್ಠ ಬೆಲೆ 1330 ರೂ, ಸಾಮಾನ್ಯ 4000 ಹಾಗೂ ಗರಿಷ್ಠ ಬೆಲೆ 8660 ರೂಗೆ ಹರಾಜು ಕಂಡಿದೆ. ಆದರೆ ಎಎನ್‌ಆರ್ ಮಂಡಿಯಲ್ಲಿ ರೈತರೊಬ್ಬರ 15 ಕೆಜಿ ಟೊಮ್ಯಾಟೊ ಬಾಕ್ಸ್ ಹರಾಜು 2500ರಿಂದ ಆರಂಭಗೊಂಡು ಅಂತಿಮವಾಗಿ 3100 ರೂ.ಗೆ ಹರಾಜು ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net