

ಲಖನೌ: ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಟೋಲ್ ಪಾವತಿಸದ ಚಾಲಕರು ಮತ್ತು ಟೋಲ್ ಕಾರ್ಮಿಕರು ಪರಸ್ಪರ ಕಿತ್ತಾಡಿ ಹೊಡೆದಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ಟೋಲ್ ವಿವಾದದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಆ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ರಾಜ್ಯದ ಹಾಪುರ್ ಟೋಲ್ ಪ್ಲಾಜಾದಲ್ಲಿ ಟೋಲ್ ಕೆಲಸಗಾರ ಟೋಲ್ ನೀಡುವಂತೆ ಒತ್ತಾಯಿಸಿದ್ದರಿಂದ ಚಾಲಕನೊಬ್ಬ ತನ್ನ ಬುಲ್ಡೋಜರ್ನಿಂದ ಸಂಪೂರ್ಣ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ್ದಾನೆ. ಹಾಪುರದ ಛಿಜರಾಸಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಬುಲ್ಡೋಜರ್ ಚಾಲಕ ಟೋಲ್ ಸಿಬ್ಬಂದಿ ಶುಲ್ಕ ಪಾವತಿಸುವಂತೆ ಕೇಳಿದ್ದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿ ಧೀರಜ್ ಪಿಲ್ಖುವಾ ಬದೌನ್ ನಿವಾಸಿಯಾಗಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಪುರದಿಂದ ಛಿಜರಸಿ ಸುಂಕದಕಟ್ಟೆಗೆ ಜೆಸಿಬಿಯಲ್ಲಿ ಬಂದಿದ್ದ ಆತ ಟೋಲ್ ಸಿಬ್ಬಂದಿ ಟೋಲ್ ಶುಲ್ಕ ಕೇಳಿದಾಗ ಕೋಪಗೊಂಡಿದ್ದಾನೆ. ಆಕ್ರೋಶದಿಂದ ಜೆಸಿಬಿ ಬುಲ್ಡೋಜರ್ನಿಂದ ಟೋಲ್ ಪ್ಲಾಜಾದ ಕ್ಯಾಬಿನ್ಗಳನ್ನು ಧ್ವಂಸ ಮಾಡಲು ಪ್ರಾರಂಭಿಸಿ ಕೆಲವೇ ಸಮಯದಲ್ಲಿ ಎರಡು ಕ್ಯಾಬಿನ್ಗಳನ್ನು ನಾಶಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೋಲ್ ಕಾರ್ಮಿಕರು ಓಡಿಹೋಗುವ ಮೂಲಕ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ವಿಧ್ವಂಸಕ ಕೃತ್ಯ ಎಸಗಿದ ಬಳಿಕ ಜೆಸಿಬಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಜೆಸಿಬಿ ಹುಡುಕಾಟ ಆರಂಭಿಸಿ ಚಾಲಕನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಸಮಯದಲ್ಲಿ ಆರೋಪಿ ಧೀರಜ್ ಪಾನಮತ್ತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಗೂಂಡಾ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಏಜೆನ್ಸೀಸ್