

ನವದೆಹಲಿ; ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008 ಅನ್ನು ತಿದ್ದುಪಡಿ ಮಾಡಿದೆ. ಟೋಲ್ ಸಂಗ್ರಹವನ್ನು ಸರಳೀಕರಿಸುವ ಉದ್ದೇಶದಿಂದ ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ದೋಷಯುಕ್ತ ಹೊಂದಿರುವ ವಾಹನಗಳಿಗೆ ಇನ್ನು ಮುಂದೆ ಎರಡು ಪಟ್ಟು ಟೋಲ್ ಶುಲ್ಕ ವಿಧಿಸಲಾಗುವುದಿಲ್ಲ, ಬದಲಿಗೆ ಫಾಸ್ಟ್‌ಟ್ಯಾಗ್ ಇರದವರು ಯುಪಿಐ ಪಾವತಿ ಮೂಲಕ ರಿಯಾಯಿತಿ ಪಡೆಯಬಹುದಾಗಿದೆ.
ಹೊಸ ತಿದ್ದುಪಡಿಯು ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ಬಲಪಡಿಸುವುದು, ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಪ್ರಯಾಣವನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಹೊಸ ನಿಯಮದಡಿಯಲ್ಲಿ, ಫಾಸ್ಟ್‌ಟ್ಯಾಗ್ ಇಲ್ಲದೆ ಶುಲ್ಕ ಪ್ಲಾಜಾವನ್ನು ಪ್ರವೇಶಿಸುವ ವಾಹನಗಳಿಗೆ ಅನ್ವಯವಾಗುವ ಬಳಕೆದಾರ ಶುಲ್ಕದ ಎರಡು ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಪಾವತಿ ಮಾಡಿದರೆ, ಎರಡುಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದರೆ ಯುಪಿಐ ಮೂಲಕ ಶುಲ್ಕ ಪಾವತಿಸುವವರಿಗೆ ನಿಗದಿಗಿಂತ 1.25 ಪಟ್ಟು ಅಧಿಕ ಶುಲ್ಕ ವಿಧಿಸಲಾಗುತ್ತದೆ. ಈ ಹೊಸ ನಿಯಮಗಳು ನವೆಂಬರ್ 15ರಿಂದ ಜಾರಿಗೆ ಬರಲಿವೆ.
(ಏಜೆನ್ಸೀಸ್)
ವಾಹನಕ್ಕೆ ಸಾಮಾನ್ಯ ಟೋಲ್ ಶುಲ್ಕ ರೂ.100 ಇದ್ದರೆ, ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸುವುದರಿಂದ ರೂ.100 ಮಾತ್ರ ಖರ್ಚಾಗುತ್ತದೆ. ಅಂದಹಾಗೆ, ನಿಮ್ಮ ಫಾಸ್ಟ್‌ಟ್ಯಾಗ್ ಕಾರ್ಯನಿರ್ವಹಿಸದಿದ್ದರೆ, ನೀವು ರೂ.200 ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ, ಆದರೆ UPI ಬಳಸುವುದರಿಂದ ಕೇವಲ ರೂ.125 ಮಾತ್ರ ಖರ್ಚಾಗಲಿದೆ. UPI ಪಾವತಿಗಳನ್ನು ಮಾಡುವ ಬಳಕೆದಾರರು ಈಗ ನಗದು ಪಾವತಿಗಳಿಗೆ ಹೋಲಿಸಿದರೆ ಗಮನಾರ್ಹ ಪರಿಹಾರವನ್ನು ಪಡೆಯಲಿದ್ದಾರೆ. ಈ ಬದಲಾವಣೆ ಫಾಸ್ಟ್‌ಟ್ಯಾಗ್ ಅನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗದ ಅಥವಾ ಟ್ಯಾಗ್‌ಗಳ ಅವಧಿ ಮುಗಿದ ಚಾಲಕರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಲಿದೆ.