

ಕೋಲಾರ: ಜರೂರು ಪ್ರಯಾಣಕ್ಕೆ ಅನುಕೂಲವಾಗುವಂತೆ ಮತ್ತು ವ್ಯಾಪಾರ ಉತ್ತೇಜನ ಮುಂದಿಟ್ಟುಕೊಂಡು ನಿರ್ಮಾಣ ಮಾಡಿರುವ ಬೆಂಗಳೂರು-ಚೆನ್ನೈ ಕಾರಿಡಾರ್ ಅಧಿಕೃತ ಉದ್ಘಾಟನೆಗೂ ಮುನ್ನವೇ ಟೋಲ್ ಸಂಗ್ರಹಕ್ಕೆ ಅಧಿಸೂಚನೆ ಹೊರಡಿಸಿರುವುದು ವಾಹನ ಮಾಲೀಕರು, ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ಭಾರತೀಯ ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲೆಯ ಮಾರ್ಗವಾಗಿ ನಿರ್ಮಾಣ ಮಾಡಲಾಗಿದೆ. ಪ್ರಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ತೆರೆ ಮರೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ವಾಹನಗಳಿಗೆ ಟೋಲ್ ಶುಲ್ಕ ನಿಗದಿಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆ ತಾಲೂಕಿನ ಹೆಡಿಗಿನಬೆಲೆ ಆರಂಭಗೊಂಡಂತೆ ಅಗ್ರಹಾರ, ಕೃಷ್ಣಾವರಂ, ಮಾಲೂರು ಮತ್ತು ಕೆಜಿಎ್ ತಾಲೂಕಿನ ಸುಂದರಪಾಳ್ಯದತನಕ 4 ಟೋಲ್ ಪ್ಲಾಜಾಗಳಿದ್ದು, ಅಂತರ ಆಧರಿಸಿ ಟೋಲ್ ಶುಲ್ಕ ವಿಧಿಸಲಾಗಿದೆ.
ಹೊಸಕೋಟೆ ಹೆಡಿಗಿನಬೆಲೆಯಲ್ಲಿ ಟೋಲ್ ಪ್ಲಾಜಾ ಇದ್ದು, ಇದಾದ ನಂತರ ಕೊನೆಯದಾಗಿ ಕೆಜಿಎಫ್ ತಾಲೂಕಿನ ಗಡಿ ಸುಂದರಪಾಳ್ಯದ ಸಮೀಪ ಟೋಲ್ ಪ್ಲಾಜಾ ಇದೆ. ಹೊಸಕೋಟೆಯಿಂದ ಇದೇ ರಸ್ತೆಯಲ್ಲಿ ಮಾಲೂರು ಕಡೆಗೆ ಪ್ರಯಾಣಿಸಬೇಕಾದರೆ ಅಗ್ರಹಾರ ಬಳಿ ಟೋಲ್ ಸಿಗುತ್ತದೆ.
ಹೊಸಕೋಟೆಯಿಂದ ಕೆಜಿಎಫ್ಗೆ ತೆರಳುವ ವಾಹನವು ಹೆಡಿಗಿನಬೆಲೆ ಟೋಲ್ ಪ್ಲಾಜಾದಲ್ಲಿ ಸ್ಕಾ$ನ್ ಆಗುತ್ತದೆ. ಕಾರು, ಜೀಪು ಚಾಲಕರು ಕೃಷ್ಣಾವರಂ ಟೋಲ್ ದಾಟಬೇಕಾದರೆ 155 ರೂ. ಸುಂದರಪಾಳ್ಯದ ಟೋಲ್ ಪ್ಲಾಜಾ ದಾಟಬೇಕಾದರೆ 185 ರೂ. ಶುಲ್ಕ ಪಾವತಿಸಬೇಕು. ಮಾಲೂರು ಕಡೆಗೆ ಪ್ರಯಾಣಿಸುವವರು ಅಗ್ರಹಾರ ಟೋಲ್ ಪ್ಲಾಜಾದಲ್ಲಿ 65 ರೂ. ಶುಲ್ಕ ಪಾವತಿಸಬೇಕಿದೆ.
ಲಘು ವಾಣಿಜ್ಯ ವಾಹನಗಳು, ಸರಕು ವಾಹನಗಳು, ಮಿನಿ ಬಸ್ಗಳಿಗೆ ಹೆಡಿಗಿನಬೆಲೆಯಿಂದ ಸುಂದರಪಾಳ್ಯಕ್ಕೆ ಏಕಮುಖ ಪ್ರಯಾಣಕ್ಕೆ 295 ರೂ., ಸುತ್ತುವರಿದ ಪ್ರಯಾಣಕ್ಕೆ 445 ರೂ. ವಿಧಿಸಲಾಗುತ್ತದೆ. ಸುಂದರಪಾಳ್ಯದಿಂದ ಹೆಡಿಗಿನಬೆಲೆಗೆ ಏಕಪ್ರಯಾಣಕ್ಕೆ 305 ರೂ. ಮತ್ತು ಸುತ್ತುವರಿದ ಪ್ರಯಾಣಕ್ಕೆ 455 ರೂ. ಆಗುತ್ತದೆ.
ಇನ್ನು ಟ್ರಕ್ಗಳು ಮತ್ತು ಬಸ್ಗಳಂತಹ ದೊಡ್ಡ ವಾಹನಗಳಿಗೆ, ಹೆಡಿಗಿನಬೆಲೆಯಿಂದ ಸೂರ್ಯಪಾಳ್ಯಕ್ಕೆ ಏಕಮುಖ ಪ್ರಯಾಣಕ್ಕೆ 620 ರೂ. ಮತ್ತು ಸುತ್ತುವರಿದ ಪ್ರಯಾಣಕ್ಕೆ 930 ರೂ., ಬಂದ ದಾರಿಯಿಂದ ವಾಪಸ್ ಹೋಗುವ ವಾಹನಗಳಿಗೆ 635 ರೂ. ಮತ್ತು 955 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಸದ್ಯಕ್ಕೆ ನಾಲ್ಕು ಪಥದ ಈ ಹೆದ್ದಾರಿಯು ಹೊಸಕೋಟೆಯಿಂದ ಮಾಲೂರು, ಬಂಗಾರಪೇಟೆ, ಬೇತಮಂಗಲ, ಕೆಜಿಎಫ್ ನಗರ ಸಂಪರ್ಕಿಸುತ್ತದೆ. ನಂತರ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕೆಲ ನಗರಗಳ ಮೂಲಕ ಹಾದು ಚೆನ್ನೆ$ ತಲುಪುತ್ತದೆ. ಒಟ್ಟು 288 ಕಿ.ಮೀ ಉದ್ದದ ಎಕ್ಸ್ಪ್ರೆಸ್ವೇ ಇದಾಗಿದ್ದು, ಕೊನೆಯ ಮೈಲಿ ಸಂಪರ್ಕ ಸುಧಾರಿಸಲು, ಗ್ರಾಮ ಮತ್ತು ಜಿಲ್ಲಾ ರಸ್ತೆಗಳನ್ನು ನವೀಕರಿಸಲು ಹೆದ್ದಾರಿ ಪ್ರಾಧಿಕಾರ ಹಣ ಬಿಡುಗಡೆ ಮಾಡಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
* ದ್ವಿಚಕ್ರ ಸಂಚಾರಕ್ಕೆ ರ್ನಿಬಂಧ
ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಈಗಾಗಲೇ ಪೊಲೀಸ್ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಕಾರು, ಬಸ್, ಲಾರಿ ಸೇರಿ ದೊಡ್ಡ ಗಾತ್ರದ ವಾಹನಗಳ ವೇಗಕ್ಕೆ ದ್ವಿಚಕ್ರ ವಾಹನಗಳು ಹೊಂದಿಕೊಂಡು ಸಂಚರಿಸಲು ಆಗುವುದಿಲ್ಲ. ಆ ವೇಳೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆದ್ದಾರಿಯಲ್ಲಿ ದ್ವಿಚಕ್ರವಾಹನಗಳ ಸಂಚಾರ ರ್ನಿಬಂಧಿಸಲಾಗಿದೆ.