ಇಂದು, ನಾಳೆ ಆರ್​ಎಸ್​ಎಸ್-ಬಿಜೆಪಿ ಸಮನ್ವಯ ಬೈಠಕ್: ಬೊಮ್ಮಾಯಿ ಸರ್ಕಾರ, ಸಚಿವರ ಕಾರ್ಯವೈಖರಿ ಮೌಲ್ಯಮಾಪನ

Bjp 1
Published on

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಗುರುವಾರ ಮಹತ್ವದ ಪರೀಕ್ಷೆ ನಡೆಯಲಿದೆ. ಅಲ್ಲದೆ, ಸಚಿವ ಸಂಪುಟದ ಸದಸ್ಯರ ಕಾರ್ಯಕ್ಷಮತೆ ಮೌಲ್ಯಮಾಪನದ ಫಲಿತಾಂಶ ಶುಕ್ರವಾರ ಗೊತ್ತಾಗುವ ನಿರೀಕ್ಷೆಯಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್), ಭಾರತೀಯ ಜನತಾ ಪಕ್ಷ ರಾಜ್ಯ ಸಮಿತಿ ಎರಡು ದಿನಗಳ ಸಮನ್ವಯ ಬೈಠಕ್ ಈ ಪರೀಕ್ಷೆ ಮತ್ತು ಫಲಿತಾಂಶಕ್ಕೆ ವೇದಿಕೆಯಾಗಿದೆ. ಮೊದಲ ದಿನವಾದ ಗುರುವಾರದ ಸಮನ್ವಯ ಬೈಠಕ್ ‘ಕೇಶವ ಕೃಪಾ’ದಲ್ಲಿ ನಿಗದಿಯಾಗಿದ್ದರೆ, ಬೆಂಗಳೂರು ಹೊರ ವಲಯದ ಖಾಸಗಿ ರೆಸಾರ್ಟ್​ವೊಂದರಲ್ಲಿ ಎರಡನೇ ದಿನದ (ಶುಕ್ರವಾರ) ಬೈಠಕ್ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಆರ್​ಎಸ್​ಎಸ್ ಮತ್ತು ಪಕ್ಷದೊಳಗೆ ಗಂಭೀರ ಚಿಂತನೆ, ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಾಧ್ಯತೆ ಕಾರಣಕ್ಕೆ ಈ ಬಾರಿಯ ಸಮನ್ವಯ ಬೈಠಕ್ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪೂರ್ವಸಿದ್ಧತೆಗಾಗಿ ಮತ್ತೊಂದು ಪ್ರಮುಖ ಬೈಠಕ್ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಚಿಂತನ-ಮಂಥನ ಸಭೆ ಎಂದೂ ಕರೆಯಬಹುದಾಗಿದೆ ಎನ್ನುತ್ತವೆ ಪಕ್ಷದ ಮೂಲಗಳು.

ಮಾರ್ಗಸೂಚಿ ನಿಗದಿ: ವರ್ಷದಲ್ಲಿ ನಾಲ್ಕು ಬಾರಿ ಸಮನ್ವಯ ಬೈಠಕ್​ನಲ್ಲಿ ನಡೆದು ಬಂದ ದಾರಿ ಅವಲೋಕನದ ಜತೆಗೆ ಮುಂದಿನ ನಡೆಗೆ ಮಾರ್ಗಸೂಚಿ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ. ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿ, ಜನರಿಗೆ ನೇರವಾಗಿ ತಲುಪುವ ನೀತಿ- ನಿರ್ಧಾರ ನಿರ್ವಹಿಸಿದ ರೀತಿ, ಸರ್ಕಾರ ಮತ್ತು ಪಕ್ಷದ ವರ್ಚಸ್ಸುವೃದ್ಧಿಗೆ ಪೂರಕ-ಮಾರಕವಾದ ಅಂಶಗಳ ಬಗ್ಗೆ ಮುಕ್ತವಾದ ವಿಚಾರ-ವಿಮರ್ಶೆಯಾಗಲಿದೆ. ಸಂಪುಟ ಸಹೋದ್ಯೋಗಿಗಳು ಮಾತ್ರವಲ್ಲ, ಶಾಸಕರ ಕಾರ್ಯಕ್ಷಮತೆ ಹಾಗೂ ಕ್ಷೇತ್ರದ ಜನರ ಜತೆಗೆ ನಿಕಟತೆ, ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳ ಸಮರ್ಪಕ ಜಾರಿಗೆ ಶ್ರಮಿಸಿದ ಪರಿಯೂ ಚರ್ಚೆಯಾಗಲಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಅಭಿವೃದ್ಧಿ ಪ್ರಧಾನ ಕಾರ್ಯಸೂಚಿ ಎಂಬ ವಿಷಯಕ್ಕೆ ಸಂಘ ಮತ್ತು ಪಕ್ಷದ ವರಿಷ್ಠರ ಹಂತದಲ್ಲಿ ಒಮ್ಮತವಿದೆ. ಅದೇ ಕಾಲಕ್ಕೆ ಸಾಮಾಜಿಕ-ಆರ್ಥಿಕ, ಭಾವನಾತ್ಮಕ ವಿಚಾರಗಳಿಗೂ ಆದ್ಯತೆ ನೀಡಬೇಕಾಗಿದೆ. ಇದು ಸಂಘದ ಜತೆಗೆ ಪಕ್ಷದ ನಿಲುವೂ ಹೌದು. ಅನೇಕ ಸಮುದಾಯಗಳ ವಿವಿಧ ಮೀಸಲು ಸೌಲಭ್ಯ ಹಾಗೂ ಮೀಸಲು ಪ್ರಮಾಣ ಹೆಚ್ಚಳದ ಬೇಡಿಕೆ ನಿಭಾಯಿಸುವ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನವನ್ನೂ ಈ ಬೈಠಕ್ ನೀಡುವ ಸಾಧ್ಯತೆಯಿದೆ.

ಅಸಮಾಧಾನ ತಣಿಸುವ ಕೌತುಕ: ಸಚಿವರ ಕಾರ್ಯವೈಖರಿ ಸಮರ್ಪಕವಾಗಿಲ್ಲ ಎಂಬ ಶಾಸಕರ ಅಸಮಾಧಾನ, ಕಾರ್ಯಕರ್ತರ ದೂರುಗಳನ್ನು ಬೈಠಕ್ ಇತ್ಯರ್ಥಪಡಿಸುವ ರೀತಿ ಬಗ್ಗೆ ಕೌತುಕವಿದೆ. ಹಾಗೆಯೇ ಹಿಜಾಬ್, ಧರ್ಮ ದಂಗಲ್ ಇನ್ನಿತರ ವಿವಾದಗಳು, ಅಕ್ರಮ ಆರೋಪಗಳು, ವಿವಿಧ ಹಗರಣಗಳು, ಪ್ರತಿಪಕ್ಷಗಳ ವಾಗ್ದಾಳಿಗೆ ತಕ್ಕ ಉತ್ತರ ನೀಡಿಲ್ಲವೆಂಬ ಅತೃಪ್ತಿಗೆ ಸಿಎಂ ಮತ್ತವರ ತಂಡ ನೀಡಲಿರುವ ಸಮಜಾಯಿಷಿ ಸಮನ್ವಯ ಬೈಠಕ್​ನ ಮತ್ತೊಂದು ಮುಖ್ಯಾಂಶವಾಗಿದೆ.

ನಿಗಮ-ಮಂಡಳಿ ನೇಮಕ ತಡ: ರಾಜ್ಯದ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಒಂದೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ. ಸಮನ್ವಯ ಚಿಂತನ-ಮಂಥನ ಸಭೆ ಹಾಗೂ ಆಂತರಿಕ ಕಾರಣಗಳಿಗಾಗಿ ಅಧಿಕೃತ ಆದೇಶ ಪ್ರಕಟ ಮುಂದೂಡಿಕೆಯಾಗಿದೆ ಎನ್ನಲಾಗಿದೆ.

ಚರ್ಚೆ ಸಾಧ್ಯತೆ

  • ಸರ್ಕಾರದ ಕಾರ್ಯವೈಖರಿ ಸ್ಥೂಲ ನೋಟ
  • ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆ
  • ಸಚಿವರ ಮೌಲ್ಯಮಾಪನ ವರದಿಯಂತೆ ಸಲಹೆ
  • ಹಿಮ್ಮಾಹಿತಿ ಆಧರಿಸಿ ಬದಲಾವಣೆಗಳ ಗೊತ್ತು-ಗುರಿ
  • ಜನರ ಬಳಿಗೆ ತೆರಳಲು ಬೇಕಾದ ಪೂರ್ವತಯಾರಿ
  • ಮುಂದಿನ ಚುನಾವಣೆ ಎದುರಿಸಲು ಮಾರ್ಗಪಥ
  • ‘ಸಂಘ’ದ ಕಾರ್ಯಜಾಲ ಬಳಕೆ ವಿಧಿ-ವಿಧಾನಗಳು

ಮೊದಲ ದಿನದ ಆಹ್ವಾನಿತರು: ಆರ್​ಎಸ್​ಎಸ್ ವಿವಿಧ ವಿಭಾಗಗಳ ಪ್ರಮುಖರ ಉಪಸ್ಥಿತಿ. ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್​ಕುಮಾರ್, ಒಬ್ಬರು ಪ್ರಧಾನ ಕಾರ್ಯದರ್ಶಿ ಆಹ್ವಾನಿತರು.

ಎರಡನೇ ದಿನದ ಉಪಸ್ಥಿತಿ: ಆರ್​ಎಸ್​ಎಸ್​ನ ಮುಕುಂದ್, ನಾಗರಾಜ್, ತಿಪ್ಪೇಸ್ವಾಮಿ, ಸಿಎಂ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಉಪಸ್ಥಿತಿ. ಸಚಿವ ಸಂಪುಟದ ಎಲ್ಲ ಸದಸ್ಯರು ಆಹ್ವಾನಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net