

ಬೆಂಗಳೂರು: ವಿಧಾನಪರಿಷತ್ಗೆ ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳಿಗೆ ನಡೆಯುವ ಚುನಾವಣೆಯ ಮತದಾನ ಶುಕ್ರವಾರ ನಡೆಯಲಿದ್ದು, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಚುನಾವಣೆಯಲ್ಲಿ ಶತಾಯ-ಗತಾಯ ಗೆಲುವು ಸಾಧಿಸಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೊನೇ ಕ್ಷಣದಲ್ಲಿ ತೀವ್ರ ಕಸರತ್ತು ನಡೆಸಿವೆ. ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೇಲ್ಮನೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ರಾಜಕೀಯ ಪಕ್ಷಗಳು ಪ್ರಯತ್ನ ಮಾಡುತ್ತಿವೆ. 20 ಕ್ಷೇತ್ರಗಳಲ್ಲಿ ಮೈಸೂರು, ಮಂಗಳೂರು, ಧಾರವಾಡ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ದ್ವಿಸದಸ್ಯ ಸ್ಥಾನಗಳಿವೆ. ಉಳಿದ ಕಡೆ ಒಂದು ಸ್ಥಾನ ಮಾತ್ರ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 20 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಜೆಡಿಎಸ್ ಕೇವಲ 6 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಳಗಾವಿ, ಧಾರವಾಡ ಹಾಗೂ ವಿಜಯಪುರದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ. ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಬಿಟ್ಟರೆ ಉಳಿದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಚಿಕ್ಕಮಗಳೂರಿನಿಂದ ಸ್ಪರ್ಧಿಸಿರುವ ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.
ಹಣದ ವಹಿವಾಟು: ಈ ಚುನಾವಣೆಯಲ್ಲಿ ಸಂಪೂರ್ಣ ಹಣ ಹಾಗೂ ಉಡುಗೊರೆಗಳೇ ಹೆಚ್ಚಾಗಿ ಸದ್ದು ಮಾಡಿವೆ. ಪ್ರತಿ ಮತದಾರರಿಗೆ ಸಾಕಷ್ಟು ಹಣ ಹಾಗೂ ಉಡುಗೊರೆ ಹಂಚಿಕೆಯಾಗಿದೆ ಎಂಬ ವದಂತಿಗಳಿವೆ. ಕೆಲವು ಜಿಲ್ಲೆಗಳಲ್ಲಿ ಮತದಾರರಿಗೆ ಆಮಿಷವೊಡ್ಡುವ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಮಹಿಳೆಯರೇ ಹೆಚ್ಚು: ಈ ಚುನಾವಣೆಯಲ್ಲಿ ಒಟ್ಟು 99,062 ಅರ್ಹ ಮತದಾರರಿದ್ದು, ಪುರುಷರ ಸಂಖ್ಯೆ 47,205, ಮಹಿಳಾ ಮತದಾರರ ಸಂಖ್ಯೆ 51,854 ಇದೆ. ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಕೆಲವು ಸ್ಥಳೀಯ ಸಂಸ್ಥೆಗಳು ಅಸ್ತಿತ್ವದಲ್ಲಿ ಇಲ್ಲದ ಕಾರಣಕ್ಕೆ ಮತದಾರರ ಸಂಖ್ಯೆ ಕಡಿಮೆಯಾಗಿದೆ.
ಮತದಾನ ವಂಚಿತರು: ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಅಸ್ತಿತ್ವದಲ್ಲಿ ಇಲ್ಲದ ಕಡೆ ಮತದಾರರಾಗಿರುವ ಶಾಸಕರು ಹಾಗೂ ಸಂಸದರು ಸಹ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿರುವುದು ವಿಶೇಷವಾಗಿದೆ.
ಮತದಾನಕ್ಕೆ ಸಜ್ಜು: ಪ್ರಾಶಸ್ಱ ಮತಗಳ ಆಧಾರದಲ್ಲಿ ನಡೆಯುವ ಈ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದೆ. ರಾಜ್ಯಾದ್ಯಂತ 6072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಶಾಂತಿಯುತ ಮತದಾನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಬಂದೋಬಸ್ತ್ಗಾಗಿ ಎಲ್ಲ ಮತಗಟ್ಟೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಮತಗಟ್ಟೆಯ ಸುತ್ತ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಬ್ಬರದ ಪ್ರಚಾರ: ವಿಧಾನಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖ ನಾಯಕರು ಕಳೆದ ಕೆಲ ದಿನಗಳಿಂದ ಎಲ್ಲೆಡೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಆಯಾ ಪಕ್ಷದ ಶಾಸಕರು, ಮುಖಂಡರು ಪ್ರಚಾರ ನಡೆಸಿದ್ದಾರೆ.
ನಾಮನಿರ್ದೇಶಿತರಿಗೆ ಮತ ಹಕ್ಕು: ಆನೇಕಲ್, ಅತ್ತಿಬೆಲೆ ಹಾಗೂ ಬೊಮ್ಮಸಂದ್ರ ಪುರಸಭೆಗಳ 15 ನಾಮನಿರ್ದೇಶಿತ ಸದಸ್ಯರಿಗೆ ವಿಧಾನಪರಿಷತ್ನ ಬೆಂಗಳೂರು ನಗರ ಸ್ಥಳೀಯ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಿರುವ ಹೈಕೋರ್ಟ್, ನ್ಯಾಯಾಲಯದ ಅನುಮತಿಯಿಲ್ಲದೆ ಚುನಾವಣಾ ಫಲಿತಾಂಶ ಪ್ರಕಟಿಸಬಾರದೆಂದು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಮತದಾರರ ಪಟ್ಟಿಯಿಂದ ನಾಮನಿರ್ದೇಶಿತ ಸದಸ್ಯರ ಹೆಸರು ಕೈಬಿಡಲು ನಿರ್ದೇಶಿಸುವಂತೆ ಕೋರಿ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಮತದಾನ ಬೇಡ: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಅವಕಾಶ ಕೊಡಬಾರದೆಂದು ಕಾಂಗ್ರೆಸ್ ಹೋರಾಟ ಮುಂದುವರಿಸಿದೆ. ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ತಿರಸ್ಕರಿಸಬೇಕು ಎಂದು ರಾಜ್ಯ ಚುನಾವಣೆ ಆಯೋಗದ ಮೂಲಕ ಕೇಂದ್ರ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕ್ಯಾಮರಾ ಕಣ್ಗಾವಲು: ಮತದಾನದ ದಿನ ಯಾವುದೇ ಅಕ್ರಮ ನಡೆಯದಂತೆ ತಡೆಗಟ್ಟಲು ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾಡಳಿತ ಎಲ್ಲ 511 ಮತಗಟ್ಟೆಗಳಲ್ಲಿ ‘ವಿಡಿಯೋ ಚಿತ್ರೀಕರಣ’ ವ್ಯವಸ್ಥೆ ಮಾಡಿದೆ. ಗ್ರಾಪಂ ಮಹಿಳಾ ಸದಸ್ಯರ ಹೆಸರಿನಲ್ಲಿ ಬೇರೆಯವರು ಮತ ಚಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಮತದಾರರನ್ನು ಖಾತ್ರಿ ಪಡಿಸಿಕೊಳ್ಳುವ ಉದ್ದೇಶದಿಂದಲೇ ‘ ಮೈಕ್ರೋ ಅಬ್ಸರ್ವರ್ಸ್ ನೇಮಿಸಲಾಗಿದೆ.