ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ; ಭಾರತದ ಈಶಾನ್ಯ ರಾಜ್ಯಗಳ ಕೆಲ ಪ್ರದೇಶದಲ್ಲಿ ಮಾತ್ರ ಖಗೋಳ ವಿಸ್ಮಯ ಗೋಚರ

Eclipse
Published on

ನವದೆಹಲಿ: 2021ರ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ ನವೆಂಬರ್ 19ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರ ಗ್ರಹಣವಾದರೂ 21ನೇ ಶತಮಾನದ ಸುದೀರ್ಘ ಚಂದ್ರ ಗ್ರಹಣವಾಗಲಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಂಥ ಭಾರತದ ಈಶಾನ್ಯ ರಾಜ್ಯಗಳಿಂದ ಈ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಮೇ 26ರಂದು ಸಂಭವಿಸಿದ 2021ರ ಮೊದಲ ಹಾಗೂ ಪೂರ್ಣ ಚಂದ್ರ ಗ್ರಹಣವನ್ನು ಸೂಪರ್ ಬ್ಲಡ್ ಮೂನ್ ಎಂದು ಕರೆಯಲಾಗಿತ್ತು.

ಬೀವರ್ ಮೂನ್ ಎಂದೂ ಹೇಳಲಾಗುವ ಈ ಚಂದ್ರ ಗ್ರಹಣವು ಅಮೆರಿಕ, ಉತ್ತರ ಯುರೋಪ್, ಆಸ್ಟ್ರೇಲಿಯಾ, ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ವಲಯದಿಂದ ಭಾರತೀಯ ಕಾಲಮಾನ ರಾತ್ರಿ 1.02ರಿಂದ ಬೆಳಿಗ್ಗೆ 6.03 ರವರೆಗೆ ಗೋಚರಿಸುತ್ತದೆ. 2021 ನವೆಂಬರ್ 19ರಂದು ಸಂಭವಿಸುವ ಗ್ರಹಣ ಭಾಗಶಃ ಚಂದ್ರ ಗ್ರಹಣವಾಗಲಿದೆ. ಹಿಂದು ಕ್ಯಾಲೆಂಡರ್ ಪ್ರಕಾರ ನವೆಂಬರ್ 19ರಂದು ಕಾರ್ತಿಕ ಹುಣ್ಣಿಮೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲೈವ್ ಸ್ಟ್ರೀಮ್ಲ್ಲಿ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಮುಂದಿನ ಚಂದ್ರ ಗ್ರಹಣ ಸಂಭವಿಸುವುದು 202ರ ನವೆಂಬರ್ 8ರಂದು. ಅದು ಪೂರ್ಣ ಚಂದ್ರ ಗ್ರಹಣವಾಗಲಿದೆ.

ಏನಿದು ಭಾಗಶಃ ಚಂದ್ರ ಗ್ರಹಣ?: ಚಂದ್ರನ ಒಂದು ಭಾಗ ಮಾತ್ರ ಭೂಮಿಯ ಪೂರ್ಣ ಛಾಯೆ ನೆರಳಿನ (ಅಂಬ್ರಾಲ್ ಶ್ಯಾಡೋ) ಅಡಿಯಲ್ಲಿ ಬಂದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದು ಹೋಗುತ್ತದೆ. ಆದರೆ ಈ ಮೂರೂ ಆಕಾಶಕಾಯಗಳು ಒಂದೇ ರೇಖೆಯಲ್ಲಿ ಸಂಧಿಸುವುದಿಲ್ಲ. ಅದಕ್ಕೆ ಬದಲಾಗಿ ಹುಣ್ಣಿಮೆ ದಿನದಂದು ಭೂಮಿಯು ಸೂರ್ಯ ಹಾಗೂ ಚಂದ್ರನ ನಡುವೆ ನೇರ ರೇಖೆಯಲ್ಲಿ ಬಂದಾಗ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ; ಚಂದ್ರಗ್ರಹಣದ ಅವಧಿ 3 ಗಂಟೆ 28 ನಿಮಿಷ, 24 ಸೆಕೆಂಡ್; ಇದು 580 ವರ್ಷಗಳಲ್ಲಿ ಸುದೀರ್ಘ ಭಾಗಶಃ ಚಂದ್ರಗ್ರಹಣ;440 ಫೆಬ್ರವರಿ 18ರಂದು ಇಷ್ಟು ಸುದೀರ್ಘ ಭಾಗಶಃ ಚಂದ್ರ ಗ್ರಹಣ ಸಂಭವಿಸಿತ್ತು.

ಚಂದ್ರನು ಸಂಪೂರ್ಣ ಭೂಮಿಯ ನೆರಳಿನಿಂದ ಆವೃತಗೊಳ್ಳದೆ ಕೆಲವು ಭಾಗ ಸೂರ್ಯನ ಬೆಳಕಿನಿಂದ ಪ್ರಕಾಶಿಸಲ್ಪಡುತ್ತದೆ. ಇದು ಪಾರ್ಶ್ವ ಚಂದ್ರಗ್ರಹಣ. ಈ ಗ್ರಹಣವು ಚಂದ್ರ ಅಪಭೂ ಬಿಂದುವಿನಲ್ಲಿದ್ದಾಗ ಸಂಭವಿಸುವುದರಿಂದ ಚಂದ್ರನು ಸ್ವಲ್ಪ ಸಣ್ಣದಾಗಿ ಗೋಚರಿಸುತ್ತಾನೆ. ಭೂಮಿ ಹಾಗೂ ಚಂದ್ರನ ಅಂತರದಿಂದ ಸುಮಾರು 6 ಗಂಟೆ 22 ನಿಮಿಷ ಈ ಗ್ರಹಣ ಗೋಚರಿಸುತ್ತದೆ. ಇಂತಹ ದೀರ್ಘ ಗ್ರಹಣವನ್ನು ಇನ್ನೊಮ್ಮೆ ನೋಡಬೇಕಿದ್ದರೆ 2669ರವರೆಗೆ ಕಾಯಬೇಕಾಗುತ್ತದೆ.

| ಮೇಘನಾ ಜೆ.ವಿ. ಪಿಪಿಸಿ ಭೌತಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಕಿ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net