

ದೇಶದಲ್ಲಿ ಆನೆ ಸಂತತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಏಷ್ಯಾದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಖ್ಯಾತಿ ಭಾರತದ್ದು. ಈ ಪೈಕಿ ದೇಶದಲ್ಲೇ ಕರ್ನಾಟಕದ ಪಾಲು ದೊಡ್ಡದು ಎನ್ನುವುದು ಹೆಮ್ಮೆಯ ಸಂಗತಿ. ವರ್ಷದಿಂದ ವರ್ಷಕ್ಕೆ ಆನೆಗಳ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ಸರಣಿ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅಗತ್ಯ. ದೇಶದಲ್ಲೇ ಅತಿ ಹೆಚ್ಚು ಆನೆಗಳು ಹೊಂದಿರುವ ಖ್ಯಾತಿ ಕರ್ನಾಟಕದ್ದು.
ಕರ್ನಾಟಕದಲ್ಲಿ ಆನೆ ಮತ್ತು ಮಾನವ ಸಂಘರ್ಷ ತಾರಕಕ್ಕೇರಿದ್ದು, ಆನೆಗಳ ಸಾವಿನ ಸರಣಿ ಮುಂದುವರಿದಿದೆ. ಕಳೆದ 5 ವರ್ಷಗಳಿಂದ ವಿವಿಧ ಕಾರಣಗಳಿಂದ 372 ಆನೆಗಳು ಮೃತಪಟ್ಟಿವೆ. ಈ ಪೈಕಿ 67 ಆನೆಗಳ ಸಾವು ಅಸಹಜವಾಗಿದೆ. ಕೆಲ ಆನೆಗಳು ಗುಂಡೇಟಿನಿಂದ, ಇನ್ನು ಕೆಲವು ವಿದ್ಯುತ್ ತಗುಲಿ ಪ್ರಾಣ ಬಿಟ್ಟಿವೆ. ಕೆಲವು ರೈಲು ಅಪಘಾತದಿಂದ ಮೃತಪಟ್ಟಿವೆ. ರಾಜ್ಯದಲ್ಲಿ ಸದ್ಯ 6395 ಆನೆಗಳಿವೆ. ಇತ್ತೀಚೆಗೆ ಆನೆ ಕಾರಿಡಾರ್ಗಳು ಛಿದ್ರವಾಗಿವೆ. ಕಾಡುಗಳಲ್ಲಿ ಬಿದಿರು ಒಣಗುತ್ತಿದ್ದು, ಮೇವು ಮತ್ತು ನೀರಿಗಾಗಿ ಗಜಪಡೆ ಅರಣ್ಯದಿಂದ ಆಚೆ ಬಂದು ಜೀವ ಕಳೆದುಕೊಳ್ಳುತ್ತಿವೆ.
ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕನಕಪುರ ಪ್ರದೇಶದಲ್ಲಿ ಆನೆ-ಮಾನವ ಸಂಘರ್ಷ ಸಮಸ್ಯೆ ಹೆಚ್ಚಾಗಿದೆ. ಮುಖ್ಯವಾಗಿ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ನಿರಂತವಾಗಿ ನಡೆಯುತ್ತಲೇ ಇದೆ. ರಾಜ್ಯದಲ್ಲಿ 2020-21ರಲ್ಲಿ 74 (16 ಅಸಹಜ) ಸಾವು, 2021-22ರಲ್ಲಿ 89 (16 ಅಸಹಜ), 2022-23ರಲ್ಲಿ 74 (16 ಅಸಹಜ), 2023-24ರಲ್ಲಿ 101 (14 ಅಸಹಜ), 2024-25ರಲ್ಲಿ 34 (5 ಅಸಹಜ) ಆನೆಗಳು ಮೃತಪಟ್ಟಿವೆ.
ಶಾಕ್ನಿಂದ ಮೃತಪಟ್ಟ ‘ಅಶ್ವತ್ಥಾಮ’!: ಎರಡು ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಭವಿಷ್ಯದ ಅಂಬಾರಿ ಆನೆ ಎಂದೇ ಬಿಂಬಿಸಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆ ಕೂಡ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಶಿಬಿರದಲ್ಲಿ ವಿದ್ಯುತ್ ಶಾಕ್ನಿಂದ ಮೃತಪಟ್ಟಿತು.
ವಿದ್ಯುತ್ ಶಾಕ್, ಗುಂಡೇಟು!: ಮಡಿಕೇರಿ, ಹಾಸನ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಕಾಫಿ ಬೆಳೆಗಾರರು ಹೆಚ್ಚಿರುವ ಪ್ರದೇಶಗಳಲ್ಲಿ ವಿದ್ಯುತ್ ಸ್ಪರ್ಶಕ್ಕೆ ಮತ್ತು ಗುಂಡೇಟಿಗೆ ಸಾವನ್ನಪ್ಪುವ ಆನೆಗಳ ಸಂಖ್ಯೆ ಹೆಚ್ಚಿದೆ. ಕಾಡಾನೆಗಳಿಂದ ಕಾಫಿ, ಬಾಳೆ, ಅಡಕೆ, ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆಗಳ ನಾಶ ತಡೆಯಲೆಂದು ಕೆಲವು ರೈತರು ಗನ್ಗಳಿಂದ ಶೂಟ್ ಮಾಡುತ್ತಾರೆ. ಕೆಲವರು ಸೀಸದಿಂದ ಮಾಡಲ್ಪಟ್ಟ ಗೋಲಿಗಳಿಂದ (ಗುಂಡುಗಳು) ಶೂಟ್ ಮಾಡುತ್ತಿದ್ದು, ಅದು ಆನೆಯ ದೇಹಕ್ಕೆ ಬಿದ್ದರೆ ಕೇವಲ ಏಟು ಬಿದ್ದು ಆನೆಗಳು ಬೇರೆ ಕಡೆ ಹೊರಟುಹೋಗುತ್ತವೆ. ಆದರೆ, ಗೋಲಿಯು ಆನೆಯ ತಲೆಗೆ ಬಿದ್ದರೆ ಅದು ಕ್ರಮೇಣ ಸಾವನ್ನಪ್ಪುತ್ತದೆ. ಇಂಥ ಘಟನೆಗಳು ನಿಲ್ಲಬೇಕು.
ಇದೇ ವರ್ಷದ ಮೇ ತಿಂಗಳಲ್ಲಿ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ-ಶಾಂತಪುರ ಗ್ರಾಮದ ಬಳಿ ದೈತ್ಯಾಕಾರದ ಆನೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿತು. ಇತ್ತೀಚೆಗೆ ಗುಂಡ್ಲುಪೇಟೆ ಸಮೀಪದ ಕುರುಬರಹುಂಡಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಒಂಟಿ ಸಲಗ ಮೃತ್ತಪಟ್ಟಿತು. ಕಳೆದ ವರ್ಷ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ಕೆರೆಗೆ ಬಿದ್ದು 18 ವರ್ಷದ ಗಂಡಾನೆ ಮೃತಪಟ್ಟಿತು. ಅದೇ ದಿನ, ಗೋಣಿಕೊಪ್ಪಲಿನ ಅರ್ವತ್ತೊಕ್ಲು ಗ್ರಾಮದ ಕಾಫಿ ತೋಟದಲ್ಲಿ 13 ವರ್ಷದ ಗಂಡಾನೆ ವಿದ್ಯುತ್ ಕಂಬ ಸ್ಪರ್ಶಿಸಿ ಮೃತಪಟ್ಟಿತು. ಬಳಿಕ ಸುಂಟಿಕೊಪ್ಪದಲ್ಲೂ ವಿದ್ಯುತ್ ಅಘಾತಕ್ಕೆ ಒಳಗಾಗಿ ಕಾಡಾನೆ ಮೃತಪಟ್ಟಿತು. ಈ ಹಿಂದೆ ಆಹಾರಕ್ಕಾಗಿ ಕೊಡಗಿನ ಕುಶಾಲನಗರ ತಾಲೂಕಿನ ಎಸ್ಟೇಟ್ಗೆ ಬಂದು ಗರ್ಭ ಧರಿಸಿದ್ದ ಆನೆ ಗುಂಡೇಟಿಗೆ ಬಲಿಯಾಯಿತು.
ಈ ಎಲ್ಲ ಘಟನೆಗಳು ಮಾನವ ಹಾಗೂ ವನ್ಯಜೀವಿ ಸಂಘರ್ಷ ಮಿತಿಮೀರಿ ಆನೆಗಳು ಜೀವ ಬಿಡುತ್ತಿರುವುದರ ನಿದರ್ಶನಗಳು. ಅರಣ್ಯ ಇಲಾಖೆ ತಕ್ಷಣದ ಪರಿಹಾರೋಪಾಯಗಳನ್ನು ಕೈಗೊಂಡರೂ ದೀರ್ಘಾವಧಿ ಪರಿಹಾರಗಳನ್ನೂ ಯೋಚಿಸಬೇಕು. ಕಾಡಿನಿಂದ ಹೊರ ಬಂದ ಆನೆಗಳೆಷ್ಟು? ಗುಂಡೇಟು ಹೊಡೆಯುವ ಹಂತಕ್ಕೆ ಕಾರಣವೇನು? ಆರ್ಥಿಕವಾಗಿ ಹೇಗೆ ಪರಿಣಾಮಗಳಾಗುತ್ತಿವೆ ಎನ್ನುವ ಕುರಿತು ಪರಾಮರ್ಶೆಗಳು ಆಗದಿದ್ದರೆ ಸಮಸ್ಯೆ ಬಿಗಡಾಯಿಸುತ್ತಲೇ ಹೋಗುತ್ತದೆ.
ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಎಲಿಫೆಂಟ್ ಫೌಂಡೇಶನ್ ವನ್ಯಜೀವಿ ಸಂಸ್ಥೆಯು 2012ರಿಂದ ಆಗಸ್ಟ್ 12ರಂದು ವಿಶ್ವ ಗಜದಿನ ಆಚರಿಸುತ್ತ ಬಂದಿದೆ. 2016ರಿಂದ ಭಾರತದಲ್ಲೂ ಆನೆ ದಿನ ಆಚರಿಸಲಾಗುತ್ತಿದೆ. 1879ರಲ್ಲಿ ಆನೆಗಳ ಸಂರಕ್ಷಣೆಗೆಂದು ಅಧಿನಿಯಮ ಹೊರಡಿಸಲಾಗಿದ್ದು, ವಿಶೇಷ ಪರವಾನಗಿ ಹೊಂದದ ಹೊರತು ಕಾಡಾನೆಗಳನ್ನು ಕೊಲ್ಲುವುದು, ಗಾಯಗೊಳಿಸುವುದು, ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ. 2010ರಲ್ಲಿ ಭಾರತ ಸರ್ಕಾರ ಆನೆಗಳನ್ನು ಪಾರಂಪರಿಕ ಪ್ರಾಣಿ ಎಂದು ಘೋಷಿಸಿದೆ.
ಆನೆ ಕಾರಿಡಾರ್ (ಆನೆಪಥ) ಎಂಬುದು ಕಿರಿದಾದ ದಾರಿಯಾಗಿದ್ದು, ಆನೆಗಳು ಒಂದು ಆವಾಸಸ್ಥಾನದಿಂದ ಇನ್ನೊಂದಕ್ಕೆ ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ. ಮನುಷ್ಯರಿಗೆ ತೊಂದರೆಯಾಗದಂತೆ ಆನೆಗಳು ಚಲಿಸಲು ಸಹಾಯಕವಾಗುತ್ತದೆ. ಆನೆ ಕಾರಿಡಾರ್ಗಳು ಆನೆಗಳ 2 ದೊಡ್ಡ ಆವಾಸಸ್ಥಾನಗಳನ್ನು ಸಂರ್ಪಸುವ ಭೂಮಿಯ ಕಿರಿದಾದ ಪಟ್ಟಿಗಳಾಗಿವೆ. ಅಪಘಾತ, ಇತರ ಕಾರಣಗಳಿಂದ ಪ್ರಾಣಿಗಳ ಸಾವು- ನೋವುಗಳನ್ನು ಕಡಿಮೆ ಮಾಡಲು ಆನೆ ಕಾರಿಡಾರ್ ಅವಶ್ಯ. ಇಂದು ಬಹುತೇಕ ಆನೆಪಥ ಒತ್ತುವರಿಯಾಗಿರುವುದರಿಂದ ಆನೆಗಳ ಓಡಾಟಕ್ಕೆ ಅಡಚಣೆಯಾಗಿದೆ. ಅಲ್ಲದೆ ಕಾಡಿನಲ್ಲಿ ಬಿದಿರು ಸೇರಿ ಆಹಾರ ಲಭ್ಯತೆಗೆ ಪರಿಣಾಮಕಾರಿಯಾಗಿ ಯೋಜನೆ ರೂಪಿಸದೆ ಇರುವುದರಿಂದ ಗಜಪಡೆ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದೆ.
ದೇಶದಲ್ಲಿ 27,312ಕ್ಕೂ ಹೆಚ್ಚು ಆನೆಗಳಿದ್ದು, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲೇ ಹೆಚ್ಚು ಆನೆಗಳಿವೆ. ಈ ಮೂರು ರಾಜ್ಯಗಳಲ್ಲೇ 12,210 ಆನೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ 6395 ಆನೆಗಳು ಇವೆ. ಈಶಾನ್ಯ ಭಾರತದ ಅಸ್ಸಾಂನಲ್ಲಿ 5,719, ದಕ್ಷಿಣದ ಕೇರಳದಲ್ಲಿ 3,054, ತಮಿಳುನಾಡಿನಲ್ಲಿ 2,761, ಒಡಿಶಾದಲ್ಲಿ 1,966 ಆನೆಗಳಿವೆ. 1,116 ಆನೆಗಳೊಂದಿಗೆ ಬಂಡೀಪುರ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ತಾಣವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 831, ಮಲೆ ಮಹದೇಶ್ವರ ವನ್ಯಧಾಮದಲ್ಲಿ 706 ಹಾಗೂ ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ 619, ಕಾವೇರಿ ವೈಡ್ಲೈಫ್ನಲ್ಲಿ 236, ಮಡಿಕೇರಿ ವಿಭಾಗದಲ್ಲಿ 214, ಮಡಿಕೇರಿ ವೈಡ್ಲೈಫ್ನಲ್ಲಿ 113, ಮೈಸೂರು ವಿಭಾಗದಲ್ಲಿ 59, ವಿರಾಜಪೇಟೆ ವಿಭಾಗದಲ್ಲಿ 58 ಆನೆಗಳಿವೆ. ಯಲ್ಲಾಪುರ ವಿಭಾಗವು ಕೇವಲ 2 ಆನೆಗಳಿರುವುದರಿಂದ ಅತಿ ಕಡಿಮೆ ಆನೆಗಳಿರುವ ತಾಣವಾಗಿದೆ.
ಆನೆ ಕಾರಿಡಾರ್ನಲ್ಲಿ ಒತ್ತುವರಿ ತೆರವು ಮಾಡಬೇಕಿದೆ. ಪಕ್ಕದ ಜಮೀನುಗಳನ್ನು ಖರೀದಿಸಿ ಅದನ್ನು ಕಾರಿಡಾರ್ಗೆ ಸೇರಿಸಬೇಕು. ಸಮೀಪದಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡಬಾರದು. ಕಾರಿಡಾರ್ಗಳಿಗೆ ತೊಂದರೆ ಆಗುವ ಯಾವುದೇ ಯೋಜನೆಯನ್ನು ಜಾರಿ ಮಾಡಬಾರದು. ಅಲ್ಲದೆ, ಈಗ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಸಂಘರ್ಷ ತಡೆಗೆ ಆನೆ ಕಂದಕ ನಿರ್ವಿುಸುವುದು, ಸೌರಶಕ್ತಿ ಬೇಲಿ ನಿರ್ವಣ, ಆಹಾರ ಕೊರತೆ ನೀಗಿಸಲು ಅರಣ್ಯ ಪ್ರದೇಶದಲ್ಲಿ ಸಸ್ಯ ನೆಡುವುದು ಮತ್ತು ಬಿದಿರು ಬೀಜಗಳ ಬಿತ್ತನೆ, ಕೆರೆಕಟ್ಟೆ ನೀರು ತುಂಬಿಸುವುದು ಸೇರಿದಂತೆ ಎಲ್ಲ ಯೋಜನೆಗಳು ಅರಣ್ಯ ಇಲಾಖೆಯಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು.
ಹುಲಿ, ಚಿರತೆ, ಕಾಡುನಾಯಿಗಳು ಒಂದೇ ಪ್ರದೇಶದಲ್ಲಿ ವಾಸ ಮಾಡುತ್ತವೆ. ಆದರೆ, ಆನೆ ಎಲ್ಲೆಡೆ ತಿರುಗಾಡುತ್ತದೆ. ರೇಡಿಯೋ ಕಾಲರ್ ಅಳವಡಿಸಿರುವ ಗಂಡಾನೆಯೊಂದು ಶಿವಮೊಗ್ಗದಿಂದ ಥೇಣಿವರೆಗೂ ಓಡಾಡಿದೆ. ಆಯಾ ಕಾಲಗಳ ಅನುಗುಣವಾಗಿ, ಆಹಾರದ ಲಭ್ಯತೆ ನೋಡಿಕೊಂಡು ಆನೆಗಳು ಸಂಚರಿಸುತ್ತವೆ. ಮಳೆ ಕಡಿಮೆಯಾದಾಗ ಊಟಿ ಬೆಟ್ಟ ಹತ್ತಿ ಮೇಲೆ ಹೋಗುತ್ತವೆ. ಮಳೆಗಾಲದಲ್ಲಿ ಬೆಟ್ಟ ಇಳಿದು ಬಂಡೀಪುರ, ನಾಗರಹೊಳೆ ಕಡೆ ಬರುತ್ತವೆ. ಹಾಗಾಗಿ, ಆನೆ ವಿಷಯದಲ್ಲಿ ಒಂದು ಭಾಗಕ್ಕೆ ಮಾತ್ರ ಪರಿಹಾರ ನೀಡಲು ಆಗಲ್ಲ. ತಮಿಳುನಾಡಿನ ಊಟಿ, ವೈನಾಡು, ಹಳೇ ಮೈಸೂರು ಭಾಗ ಸೇರಿದಂತೆ ಒಟ್ಟಾರೆ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಕಾಡುಗಳಲ್ಲಿ ಎಷ್ಟು ಆನೆಗಳಿವೆ? ಎಷ್ಟು ಆನೆ ಇರಬೇಕು? ಎಲ್ಲ ಆನೆಗಳಿಗೆ ಬೇಕಾದಷ್ಟು ಆಹಾರ ಇದೆಯಾ? ಹೆಚ್ಚಾಗಿರುವ ಆನೆಗಳನ್ನು ಏನು ಮಾಡಬೇಕು? ಬದಲಿ ಆವಾಸ ಸ್ಥಾನಕ್ಕೆ ಬಿಡಬಹುದಾ? ಎಂದು ವೈಜ್ಞಾನಿಕವಾಗಿ ಪರಿಹಾರ ಹುಡುಕಬೇಕಾಗಿದೆ. ಒಡಿಶಾ, ಛತ್ತೀಸ್ಗಢ, ಜಾರ್ಖಂಡ್, ಮಹಾರಾಷ್ಟ್ರದಲ್ಲಿ ಹೆಚ್ಚು ಕಾಡಿದ್ದರೂ ಆನೆ ಇಲ್ಲ. ನಮ್ಮಲ್ಲಿರುವ ಆನೆಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಬಹುದಾ? ಎಂದೂ ವೈಜ್ಞಾನಿಕವಾಗಿ ನೋಡಬೇಕು. | ಕೆ.ಎಸ್.ಸುಧೀರ್ ವನ್ಯಜೀವಿ ತಜ್ಞ