ರೋಗದ ಸಮೂಲನಾಶಕ್ಕೆ ಚಿಕಿತ್ಸೆ; ಇಂದು ಪ್ರಕೃತಿ ಚಿಕಿತ್ಸಾ ದಿನ..

asdasdasddsdf
Published on
| ಡಾ. ವೈ. ರುದ್ರಪ್ಪ

ನಮ್ಮ ಶರೀರ ಪಂಚಭೂತಗಳಿಂದ ಕೂಡಿದೆ. ಅದಕ್ಕೆ ತೊಂದರೆಯಾದರೆ, ಏನಾದರೂ ವ್ಯತ್ಯಾಸಗಳಾದರೆ ರೋಗ ಬರುತ್ತದೆ. ಅದಕ್ಕೆ ಪಂಚಭೂತಗಳಿಂದಲೇ ಚಿಕಿತ್ಸೆ ನೀಡಬೇಕು. ಆಗ ರೋಗಗಳನ್ನು ಬೇರುಮಟ್ಟದಿಂದ ಕಿತ್ತುಹಾಕಲು ಸಾಧ್ಯವಾಗುತ್ತದೆ. ಇಂತಹ ಪಂಚಭೂತಗಳ ಚಿಕಿತ್ಸೆಯೇ ಪ್ರಕೃತಿ ಚಿಕಿತ್ಸೆ. ಯಾವುದೇ ರೋಗಕ್ಕೆ ಪೃಥ್ವಿ (ಮಣ್ಣು), ಆಪ್ (ನೀರು), ತೇಜ (ಸೂರ್ಯ), ವಾಯು (ಗಾಳಿ) ಮತ್ತು ಆಕಾಶ (ಗಗನ) ಚಿಕಿತ್ಸೆಯನ್ನು ಪ್ರಕೃತಿ ಚಿಕಿತ್ಸೆಯಲ್ಲಿ ನೀಡಲಾಗುತ್ತದೆ. ಪ್ರಕೃತಿಯಿಂದ ಚಿಕಿತ್ಸೆ ಪಡೆದರೆ ಅದು ನಿಜವಾದ ಚಿಕಿತ್ಸೆಯಾಗುತ್ತದೆ. ಭಾರತ ಈ ವಿಧಾನದ ಕೇಂದ್ರಬಿಂದುವಾಗುತ್ತಿದೆ. ಶರೀರದಲ್ಲಿನ ಮಲ ಪದಾರ್ಥಗಳು ರೋಗದ ಮೂಲವಾಗಿರುತ್ತವೆ. ನಾಲ್ಕು ರೀತಿಯ ಮಲಗಳನ್ನು ಗುರುತಿಸಲಾಗುತ್ತದೆ. ಅವುಗಳೆಂದರೆ- ಕರುಳಿನ ಮಲ, ಕಫದ ಮಲ, ಬೆವರಿನ ಮಲ ಮತ್ತು ಮೂತ್ರದ ಮಲ. ಇವು ಶರೀರಕ್ಕೆ ಬೇಡವಾದ ವಸ್ತ್ತುಗಳು, ಆದಷ್ಟು ಬೇಗ ಇವು ಹೊರ ಹೋದರೆ ರೋಗವನ್ನು ಬೇರು ಸಮೇತ ಕಿತ್ತು ಹಾಕಬಹುದು. ಪ್ರಕೃತಿ ಚಿಕಿತ್ಸೆಯಿಂದ ಇದು ಸಾಧ್ಯವಾಗುತ್ತದೆ.

ಉಪವಾಸ ರಾಮಬಾಣ: ದೈನಂದಿನ ರೋಗ ಬಂದಾಗ ಒಂದು ದಿನದ ಉಪವಾಸ ಅತ್ಯಂತ ಪರಿಣಾಮಕಾರಿ. ಉಪವಾಸವು ಶರೀರ ಶುದ್ಧಿ ಮತ್ತು ಮಾನಸಿಕ ಶುದ್ಧಿಯನ್ನುಂಟು ಮಾಡುತ್ತದೆ. ಹಣ್ಣಿನ ರಸ ಅಥವಾ ನೀರನ್ನು ಯಥೇಚ್ಛವಾಗಿ ಸೇವಿಸುವ ಮೂಲಕ ವಮನ ಕ್ರಿಯೆ ಮಾಡಿದರೆ ಶೇ. 50ರಷ್ಟು ರೋಗ ವಾಸಿಯಾಗುತ್ತದೆ. ರೋಗಗಳು ಬಂದರೆ ನಿವಾರಣೋಪಾಯ ಇಲ್ಲವೆಂಬ ಭಾವನೆ ಅನೇಕರಲ್ಲಿದೆ. ಆದ್ದರಿಂದ ಶಮನೋಪಚಾರಕ್ಕೆ ಮುಂದಾಗುತ್ತಾರೆ. ಪ್ರಕೃತಿ ಚಿಕಿತ್ಸೆಯಲ್ಲಿ ನಿವಾರಣೋಪಾಯಗಳು ಇವೆ. ರೋಗಗಳಿಗೆ ಔಷಧಗಳನ್ನು ಸೇವಿಸಿ ಜನರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಆದ್ದರಿಂದಲೇ ಪ್ರಕೃತಿ ಚಿಕಿತ್ಸೆಯತ್ತ ಆಸಕ್ತಿ ವಹಿಸುತ್ತಿದ್ದಾರೆ.

ಪಂಚತಂತ್ರ ಮಂತ್ರ: ಪಂಚತಂತ್ರವು ಪ್ರಕೃತಿ ಚಿಕಿತ್ಸೆಯ ಮೂಲಮಂತ್ರವಾಗಿದೆ. ಅವುಗಳೆಂದರೆ-1. ದಿನಕ್ಕೆ ಎರಡು ಹೊತ್ತಿನ ಊಟ, 2. ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯುವುದು, 3. ಒಂದು ತಾಸಿನ ಯೋಗ, 4. ವಾರಕ್ಕೆ ಒಮ್ಮೆ ಉಪವಾಸ ಹಾಗೂ 5. ದಿನಕ್ಕೆ 2 ಬಾರಿ ಪ್ರಾರ್ಥನೆ ಮಾಡುವುದು. ಇದರ ವಿಶ್ಲೇಷಣೆಗೆ ಹೈದರಾಬಾದ್​ನ ಡಾ. ಬಿ. ವೆಂಕಟರಾವ್ ಅವರ ಪುಸ್ತಕವನ್ನು ಓದಬಹುದು. ಆಹಾರವೇ ನಮ್ಮ ಔಷಧವಾದಾಗ ರೋಗ ಬರದಂತೆ ತಡೆಯಬಹುದು. ಸಂಯಮ ಮತ್ತು ನಿಯಮಿತ ಜೀವನಶೈಲಿಯಿಂದ ದೊರಕುವ ಪ್ರತಿಫಲವೇ ಆರೋಗ್ಯ.

ಗಾಂಧಿ ಸಹಿ ಹಾಕಿದ ದಿನ: 1942ರ ನವೆಂಬರ್ 18 ರಂದು ಮಹಾತ್ಮಗಾಂಧಿ ಅವರು ಪುಣೆಯಲ್ಲಿ ನೇಚರ್ ಕ್ಯೂರ್ ಫೌಂಡೇಶನ್ ಸ್ಥಾಪಿಸಿದರು. ಅವರು ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದರೂ ಇದೊಂದು ಸಂಸ್ಥೆಯಲ್ಲಿ ಮಾತ್ರ ಅವರ ಸಹಿ ಇದೆ. ಆದ್ದರಿಂದ ಆ ದಿನವನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವೆಂದು ಕರೆಯಲಾಗುತ್ತದೆ. ಗಾಂಧೀಜಿ ಸ್ವತಃ ಪ್ರಕೃತಿ ಚಿಕಿತ್ಸಕರಾಗಿದ್ದರು. ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದಂತೆ ಅವರು ನೇಚರ್ ಕ್ಯೂರ್, ಕೀ ಟು ಹೆಲ್ತ್, ಡಯಟ್ ಅಂಡ್ ಡಯಟ್ ರಿಫಾಮ್ರ್ ಹಾಗೂ ರಾಮನಾಮ ಎಂಬ ನಾಲ್ಕು ಪುಸ್ತಕಗಳನ್ನು ರಚಿಸಿದ್ದಾರೆ. ಪುಣೆಯಲ್ಲಿ ಗಾಂಧಿ ಸ್ಥಾಪಿಸಿದ ಸಂಸ್ಥೆ ಈಗ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸರ್ಕಾರಗಳು ಪ್ರತಿ ತಾಲೂಕು ಮಟ್ಟದಲ್ಲಿ ನಿಸರ್ಗ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪನೆ ಮಾಡಿದರೆ ಆರೋಗ್ಯ ಬಜೆಟ್​ನ ಶೇ.80 ರಷ್ಟು ಉಳಿತಾಯ ಮಾಡಬಹುದು. ದೀರ್ಘ ಕಾಯಿಲೆಗಳಿಗೂ ಪರಿಹಾರ ಸಿಗುತ್ತದೆ.

(ಲೇಖಕರು ಹಿರಿಯ ಪ್ರಕೃತಿ ಚಿಕಿತ್ಸಾ ತಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net