

ಸರ್ವಶ್ರೇಷ್ಠ ಅಲ್ಲಾಹ್ ಪವಿತ್ರ ಗ್ರಂಥ ‘ಕುರಾನ್’ ಆವಿರ್ಭಾವಗೊಳಿಸಿದ ತಿಂಗಳು ರಂಜಾನ್. ‘ಕುರಾನ್’ ಇಸ್ಲಾಂನ ಆಚರಣೆಗಳನ್ನು ತಿಳಿಸುವ ಜತೆಗೆ, ಪ್ರತಿಯೊಬ್ಬರಲ್ಲೂ ನೈತಿಕ ಮೌಲ್ಯ ಬಿತ್ತುತ್ತದೆ. ಕೆಟ್ಟ ಕೆಲಸಗಳಿಂದ ದೂರವಿರುವಂತೆ ಎಚ್ಚರಿಸುತ್ತದೆ. ಸಮಾಜದಲ್ಲಿ ಸರ್ವರೊಂದಿಗೆ ಪ್ರೀತಿಯಿಂದ ಬಾಳುವಂತೆ ಪ್ರೇರಣೆ ತುಂಬುತ್ತದೆ.
| ಮುಹಮ್ಮದ್ ಸಲೀಮ್ ನದ್ವಿ
ಪವಿತ್ರ ಮಾಸ ‘ರಂಜಾನ್’ ಎಂದಾಕ್ಷಣ ನಮ್ಮಲ್ಲಿ ಬರುವ ಮೊದಲ ಆಲೋಚನೆಯೇ ಉಪವಾಸ ವ್ರತ (ರೋಜಾ). ಈ ಜಗತ್ತಿನಲ್ಲಿ ಹಸಿವು ಕಲಿಸುವಷ್ಟು ಪಾಠವನ್ನು ಮತ್ತೊಂದು ಸಂಗತಿ ಕಲಿಸಲಾರದು. ಇದೇ ಕಾರಣಕ್ಕೆ ಈ ತಿಂಗಳಲ್ಲಿ ಪ್ರತಿ ಮುಸ್ಲಿಮರು ರೋಜಾ ಮಾಡುವುದು ಕಡ್ಡಾಯ. ಬಡವರ ಕಷ್ಟ ಸ್ಥಿತಿವಂತರಿಗೂ ಅರ್ಥವಾಗಲಿ ಎಂಬುದು ಇದರ ಉದ್ದೇಶ.
ಈ ಮಾಸ ತುತ್ತು ಅನ್ನ, ಹನಿನೀರಿನ ಮಹತ್ವ ಸಾರುವ ಜತೆಗೆ, ಪ್ರತಿಯೊಬ್ಬರಿಗೆ ಬದುಕಿನ ಪಾಠವನ್ನೂ ಕಲಿಸುತ್ತದೆ. ಹಳಿ ತಪ್ಪಿದವರ ಬದುಕನ್ನು ಸನ್ಮಾರ್ಗದತ್ತ ಕರೆತರುತ್ತದೆ. ಮುಂದಿನ 11 ತಿಂಗಳು ನಾವು ಹೇಗೆ ಬದುಕಬೇಕು ಎನ್ನುವುದಕ್ಕೆ ಭದ್ರ ಅಡಿಪಾಯ ಹಾಕುತ್ತದೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ರಂಜಾನ್ 9ನೇ ತಿಂಗಳು. ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ರಂಜಾನ್ ಮುಕ್ತಾಯವಾಗುತ್ತದೆ. ಇದರ ಮಾರನೇ ದಿನವೇ ‘ಈದ್-ಉಲ್-ಫಿತ್ರ್’ ಹಬ್ಬ ಆಚರಿಸಲಾಗುತ್ತದೆ. ಅದರಲ್ಲೂ, ಈ ಬಾರಿ ಕರೊನಾ ವೈರಸ್ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಆತಂಕದ ಮಧ್ಯೆ ಒಂದು ತಿಂಗಳ ಕಾಲ ಶ್ರದ್ಧೆಯಿಂದ ಧಾರ್ವಿುಕ ಆಚರಣೆ ಕೈಗೊಂಡ ಮುಸ್ಲಿಮರು, ಪ್ರತಿವರ್ಷ ಬಟ್ಟೆಗಳು ಮತ್ತು ಅಲಂಕಾರಿಕ ವಸ್ತುಗಳ ಖರೀದಿಗೆ ವ್ಯಯಿಸುತ್ತಿದ್ದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿ ಮಾನವೀಯತೆ ಮೆರೆದಿದ್ದಾರೆ.
ಪ್ರಸ್ತುತ ಈದ್ಗಾ ಮೈದಾನಗಳು ಮತ್ತು ಮಸೀದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಾಗಿ, ನಮ್ಮ ಮನೆಗಳಲ್ಲೇ ಶ್ರದ್ಧೆಯಿಂದ ‘ಈದ್ ನಮಾಜ್’ ಮಾಡೋಣ. ಸರಳವಾಗಿ ಹಬ್ಬ ಆಚರಿಸಿ, ‘ಅಲ್ಲಾಹ್’ನ ಕೃಪೆಗೆ ಪಾತ್ರರಾಗೋಣ. ಕರೊನಾಮುಕ್ತ ಭಾರತ ನಿರ್ವಣಕ್ಕೆ ಕೈಜೋಡಿಸೋಣ. ಆಗ, ನಮ್ಮೆಲ್ಲರ ಬದುಕು ಸಾರ್ಥಕ.
ಕುರಾನ್ ಆವಿರ್ಭಾವಗೊಳಿಸಿದ ತಿಂಗಳು: ಸರ್ವಶ್ರೇಷ್ಠ ಅಲ್ಲಾಹ್ ಪವಿತ್ರ ಗ್ರಂಥ ‘ಕುರಾನ್’ ಆವಿರ್ಭಾವಗೊಳಿಸಿದ ತಿಂಗಳು ರಂಜಾನ್. ಸರ್ವರಿಗೆ ಮಾರ್ಗದರ್ಶಿಯಾಗಿರುವ ಈ ಗ್ರಂಥದಲ್ಲಿ ಇಸ್ಲಾಂ ಧರ್ಮದ ಇತಿಹಾಸ ಅಡಗಿದೆ. ವಿಶ್ವದಲ್ಲೇ ಹೆಚ್ಚಿನ ಓದುಗರನ್ನು ಹೊಂದಿರುವ ಶ್ರೇಯ ಇದಕ್ಕೆ ಸಲ್ಲುತ್ತದೆ.
‘ಕುರಾನ್’ ಇಸ್ಲಾಂನ ಆಚರಣೆಗಳನ್ನು ತಿಳಿಸುವ ಜತೆಗೆ, ಪ್ರತಿಯೊಬ್ಬರಲ್ಲೂ ನೈತಿಕ ಮೌಲ್ಯ ಬಿತ್ತುತ್ತದೆ. ಕೆಟ್ಟ ಕೆಲಸಗಳಿಂದ ದೂರವಿರುವಂತೆ ಎಚ್ಚರಿಸುತ್ತದೆ. ಸಮಾಜದಲ್ಲಿ ಸರ್ವರೊಂದಿಗೆ ಪ್ರೀತಿಯಿಂದ ಬಾಳುವಂತೆ ಪ್ರೇರಣೆ ತುಂಬುತ್ತದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಬದುಕಿದ ರೀತಿಯನ್ನು ಪರಿಚಯಿಸುತ್ತದೆ. 30 ಪಾರೆ(ಭಾಗ)ಗಳನ್ನು ಹೊಂದಿರುವ ಈ ಗ್ರಂಥವನ್ನು ರಂಜಾನ್ನಲ್ಲಿ ಕನಿಷ್ಠ ಒಂದು ಬಾರಿ ಸಂಪೂರ್ಣವಾಗಿ ಓದಿದರೆ, ದೇವರಿಂದ 70 ಪಟ್ಟು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಮುಸ್ಲಿಮರಲ್ಲಿದೆ. ಇದೇ ಕಾರಣಕ್ಕೆ, ರಂಜಾನ್ನಲ್ಲಿ ಹೆಚ್ಚಿನ ಸಮಯವನ್ನು ಕುರಾನ್ ಓದಲು ಮೀಸಲಿಡುತ್ತಾರೆ.
ಸಾಮಾನ್ಯ ದಿನಗಳಲ್ಲಿ ನಿತ್ಯ ಐದು ಹೊತ್ತು ನಮಾಜ್ ಮಾಡಲಾಗುತ್ತದೆ. ಆದರೆ, ರಂಜಾನ್ ಮಾಸದಲ್ಲಿ ಮಾತ್ರ ರಾತ್ರಿ ‘ತರಾವೀಹ್’ ನಮಾಜ್ ಮಾಡಲಾಗುತ್ತದೆ. ಈ ವೇಳೆ, ಮಸೀದಿಯ ಧರ್ಮಗುರುಗಳು (ಇಮಾಮಸಾಬ್) ಕುರಾನ್ ಪಠಿಸುತ್ತಾರೆ. ಅದನ್ನು ಆಲಿಸುವುದರಿಂದಲೂ ದೇವರ ಆಶೀರ್ವಾದ ದೊರೆಯುತ್ತದೆ. ಆದರೆ, ಈ ಸಲ ಕರೊನಾ ಹಿನ್ನೆಲೆಯಲ್ಲಿ ಮುಸ್ಲಿಮರು ಮನೆಯಲ್ಲೇ ನಮಾಜ್ ಮಾಡಿ, ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದ್ದಾರೆ.
ಆರೋಗ್ಯ ವೃದ್ಧಿ: ರೋಜಾ ಎಂಬುದು ಕೇವಲ ಹಸಿವಿಗೆ ಸಂಬಂಧಿಸಿದ್ದಲ್ಲ. ಅದು ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವುದೂ ಆಗಿದೆ. ರೋಜಾ ಕೈಗೊಂಡವರು ಸದಾ ದೇವರ ಸ್ಮರಣೆಯಲ್ಲಿರುತ್ತಾರೆ. ಸಕಾರಾತ್ಮಕವಾಗಿ ಆಲೋಚಿಸುತ್ತಾರೆ. ಧಾರ್ವಿುಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ. ದೇವರು ನಮ್ಮ ತಪ್ಪುಗಳನ್ನು ಮನ್ನಿಸುತ್ತಾನೆ. ಜೀವಿತಾವಧಿ ನಂತರ ನಮಗೆ ಉಡುಗೊರೆ (ಇನಾಮ್ ನೀಡುತ್ತಾನೆ. ‘ಈ ಜಗತ್ತಿನ ಮಾಲೀಕ ಒಬ್ಬನೇ’. ಆತನ ಅನುಗ್ರಹಕ್ಕಾಗಿ ಸರ್ವಧರ್ವಿುಯರು ರೋಜಾ ಕೈಗೊಳ್ಳುತ್ತಾರೆ. ಇದರಿಂದ ಪರಸ್ಪರರಲ್ಲಿ ಪ್ರೀತಿ-ಬಾಂಧವ್ಯ ವೃದ್ಧಿಸುತ್ತದೆ. ಜಾತ್ಯತೀತ ಮನೋಭಾವ ಬೆಳೆಯುತ್ತದೆ.
ಸೂರ್ಯೋದಯಕ್ಕೂ ಮುನ್ನ ಮತ್ತು ಸೂರ್ಯಾಸ್ತದ ನಂತರ ನಿಯಮಿತವಾಗಿ ಉಣ್ಣುವುದು; ರಾತ್ರಿ ಕೆಲವೇ ಗಂಟೆ ನಿದ್ರಿಸಿ, ಅಲ್ಲಾಹ್ನ ಸ್ಮರಣೆಗೆ ಒತ್ತು ನೀಡುವುದು; 10 ದಿನಗಳ ಇತಿಕಾಫ್ ವೇಳೆ, ಬೇರೆಯವರ ಜತೆ ಕಡಿಮೆ ಮಾತನಾಡುವುದು; ಈ ಮೂರು ತತ್ತ್ವಳನ್ನು ಹಬ್ಬ ಸಾರುತ್ತದೆ. ಇದನ್ನು ಪ್ರತಿಯೊಬ್ಬರೂ ಪಾಲಿಸುತ್ತಾರೆ. ತಮ್ಮ ಮನಃಪರಿವರ್ತನೆಗೆ ಈ ಮಾಸವನ್ನೇ ಆಯ್ದುಕೊಳ್ಳುತ್ತಾರೆ.
ದಾನದ ಮಹತ್ವ: ‘ರಂಜಾನ್’ ಮಾಸ ನಮ್ಮೆಲ್ಲರಿಗೆ ದಾನದ ಮಹತ್ವ ಸಾರುತ್ತದೆ. ಸ್ಥಿತಿವಂತ ಮುಸ್ಲಿಮರು ತಮ್ಮ ನಿರ್ದಿಷ್ಟ ಆದಾಯದಲ್ಲಿ ಶೇ. 2.5ರಷ್ಟು ಹಣವನ್ನು ದಾನದ ರೂಪದಲ್ಲಿ ಬಡವರಿಗೆ ನೀಡುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯ. ಅಲ್ಲದೆ, ಹಬ್ಬದ ದಿನದಂದು ಪ್ರಾರ್ಥನೆಗೂ ಮುನ್ನ, ಬಡವರಿಗೆ ಆಹಾರ ಧಾನ್ಯ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ದಾನ ಮಾಡುವಾಗ ಧರ್ಮ ನೋಡಬಾರದು.
ಸದ್ಯ ಲಾಕ್ಡೌನ್ನಿಂದ ಸಾವಿರಾರು ಕುಟುಂಬಗಳು ಅತಂತ್ರವಾಗಿವೆ. ಆಸರೆಗೆ ಸೂರು, ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಿನ ಬಂಡಿ ದೂಡಲು ಕಣ್ಣೀರು ಸುರಿಸುತ್ತಿವೆ. ಹಾಗಾಗಿ, ‘ಎಲ್ಲರನ್ನೂ ಒಂದುಗೂಡಿಸಲು ದೇವರೇ ಇಂಥದ್ದೊಂದು ಅವಕಾಶ ಸೃಷ್ಟಿಸಿದ್ದಾನೆ’ ಎಂದು ಭಾವಿಸಬೇಕು. ಜಾತಿ, ಭೇದ ಮರೆತು ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ಸಮಾಜದ ಹಿತ ಕಾಯುವುದೇ ನಮ್ಮ ಆದ್ಯತೆಯಾಗಬೇಕು. ಕರೊನಾ ಅಬ್ಬರ ನಿಲ್ಲಲಿ. ಮಂದಿರ, ಮಸೀದಿ ಮತ್ತು ಚರ್ಚ್ಗಳ ಬಾಗಿಲು ತೆರೆದು, ಸರ್ವಧರ್ವಿುಯರು ಒಂದಾಗಿ ಬಾಳುವಂತಾಗಲಿ. ಉತ್ತಮ ಮಳೆ ಸುರಿದು, ರೈತರ ಬಾಳು ಹಸನಾಗಲಿ. ದುಡಿಯುವ ಕೈಗಳಿಗೆ ಕೆಲಸ ಸಿಗಲಿ. ಮುಂದಿನ ವರ್ಷ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತಾಗಲಿ ಎಂದು ‘ಅಲ್ಲಾಹ್’ನಲ್ಲಿ ಸದಾಕಾಲ ಪ್ರಾರ್ಥಿಸಬೇಕು.
‘ಈದ್-ಉಲ್-ಫಿತ್ರ್’ ನಮಾಜ್ ನಂತರ, ಮುಸ್ಲಿಮರು ತಮ್ಮ ಸಂಬಂಧಿಕರು, ಹಿತೈಷಿಗಳ ಮನೆಗಳಿಗೆ ಭೇಟಿ ನೀಡಿ ಶುಭಾಶಯ ಕೋರುತ್ತಾರೆ. ಗೆಳೆಯರನ್ನು ಮನೆಗೆ ಆಹ್ವಾನಿಸಿ ಹಬ್ಬದೂಟ ಉಣಬಡಿಸುತ್ತಾರೆ. ಹಬ್ಬದ ಮಾರನೇ ದಿನ ದರ್ಗಾಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಭ್ರಮಿಸುತ್ತಾರೆ. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಈಗ ನಾವು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಿದೆ. ಹಾಗಾಗಿ, ಇಂಥ ಸಂಗತಿಗಳಿಂದ ದೂರವಿರಬೇಕು. ಎಲ್ಲರಿಗೂ ಶುಭವಾಗಲಿ. ನಾಡಿನ ಸಮಸ್ತ ಮುಸ್ಲಿಮರಿಗೆ ಈದ್ ಮುಬಾರಕ್.
(ಧರ್ಮಗುರುಗಳು, ಛೋಟಿ ಮಸೀದಿ, ಕ್ಯಾಂಪ್, ಬೆಳಗಾವಿ)