

ನವದೆಹಲಿ: ಕಾಂಗ್ರೆಸ್ಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಭಾನುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಏರ್ಪಡಿಸಲಾಗಿದೆ. ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಸಭೆ ನಡೆಯುತ್ತಿದ್ದು, ಜಿ-23 ಬಂಡಾಯ ಗುಂಪಿನ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ಕೂಡ ಅವರ ಜತೆಗೆ ತೆರಳಿದ್ದಾರೆ. ಹೀಗಾಗಿ ಕಾರ್ಯಕಾರಿ ಸಮಿತಿ ಸಭೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಯಲಿದೆ. ರಾಹುಲ್ ಗಾಂಧಿಯವರು ಅಧ್ಯಕ್ಷ ಹುದ್ದೆ ಸ್ವೀಕರಿಸಬೇಕು ಎಂದು ಬೆಂಬಲಿಗ ವರ್ಗ ಒತ್ತಾಯಿಸಿದ್ದರೂ, ಅವರು ನಿರಾಸಕ್ತಿ ತೋರಿದ್ದಾರೆ. ಆಜಾದ್ ಕೂಡ, ಪಕ್ಷದ ಶೋಚನೀಯ ಸ್ಥಿತಿಗೆ ರಾಹುಲ್ ನೇರ ಕಾರಣ ಎಂಬ ಗಂಭೀರ ಆಪಾದನೆ ಮಾಡಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ರಾಹುಲ್ ಏನು ಮಾತನಾಡಬಹುದು ಎಂಬ ಕುತೂಹಲವೂ ಗರಿಗೆದರಿದೆ.
ಅಜಾದ್ ನಿವಾಸಕ್ಕೆ ಶರ್ಮ: ಗುಲಾಂ ನಬಿ ಆಜಾದ್ ನಿವಾಸಕ್ಕೆ ಶನಿವಾರ ತೆರಳಿದ ಮತ್ತೋರ್ವ ಅತೃಪ್ತ ನಾಯಕ ಆನಂದ್ ಶರ್ಮ, ತಮ್ಮ ಮುಂದಿನ ನಡೆ ಬಗ್ಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಮೂಲತಃ ಹಿಮಾಚಲ ಪ್ರದೇಶದ ಆನಂದ್, ಕೆಲ ದಿನಗಳ ಹಿಂದೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ರಾಹುಲ್ ನಾಯಕತ್ವ ಹಾಗೂ ಅವರ ಹಿಂಬಾಲಕರ ಬಗ್ಗೆ ಆನಂದ್ ಕೂಡಾ ತೀವ್ರ ಅಸಮಾಧಾನ ಹೊಂದಿದ್ದಾರೆ.
ತಿವಾರಿ ವಾಗ್ದಾಳಿ: ಭಾರತ ಒಂದು ರೀತಿ ಯೋಚಿಸಿದರೆ ಕಾಂಗ್ರೆಸ್ ಪಕ್ಷ ಮತ್ತೊಂದು ರೀತಿ ಯೋಚಿಸುತ್ತಿದೆ. ಭಾರತ ಮತ್ತು ಕಾಂಗ್ರೆಸ್ ಮಧ್ಯೆ ದೊಡ್ಡ ಬಿರುಕು ಮೂಡಿರುವುದು ಎದ್ದು ಕಾಣುತ್ತಿದೆ. 2 ವರ್ಷಗಳ ಹಿಂದೆ ನಾವು 23 ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ವಾಸ್ತವ ಸ್ಥಿತಿ ವಿವರಿಸುವ ಯತ್ನ ಮಾಡಿದೆವು. ಆ ಬಗ್ಗೆ ಇನ್ನಾದರೂ ಗಂಭೀರವಾಗಿ ಅಲೋಚಿಸಬೇಕಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.
ಭಾರತ್ ಜೋಡೋ ಬಿಜೆಪಿ, ಆರ್ಎಸ್ಎಸ್ ವಿರುದ್ಧದ ಹೋರಾಟ. ಈ ಸಮಯದಲ್ಲಿ ಗುಲಾಂ ನಬಿ ಆಜಾದ್ ಬಿಜೆಪಿ, ಆರ್ಎಸ್ಎಸ್ಗೆ ಹೆದರಿ ರಾಜೀನಾಮೆ ಕೊಟ್ಟಿದ್ದಾರೆ ಅನ್ನಿಸುತ್ತದೆ. ಹಲವು ವರ್ಷ ಪಕ್ಷದಲ್ಲಿ ಅಧಿಕಾರ ಎಂಜಾಯ್ ಮಾಡಿ, ಎಲ್ಲಾ ಸ್ಥಾನಮಾನ ಪಡೆದು ಈಗ ನಾಯಕರ ಮೇಲೆ ಆಪಾದನೆ ಮಾಡಿ ಹೋಗಿರುವುದು ಸರಿಯಲ್ಲ. ಜಮ್ಮು-ಕಾಶ್ಮೀರದಲ್ಲಿ ಪಕ್ಷ ಕಟ್ಟುತ್ತೇನೆ ಅದು ಸ್ವರ್ಗ ಎಂದಿದ್ದಾರೆ, ಸ್ವರ್ಗ ಅಂದರೆ ಏನೆಂದು ಅವರೇ ಹೇಳಬೇಕು. | ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ದೇಶದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಆಜಾದ್ ಪಕ್ಷ ಬಿಟ್ಟು ಪಲಾಯನ ಮಾಡಿದ್ದಾರೆ. ಬಿಜೆಪಿ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದ ನಂತರ ಆಜಾದ್ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಅವರ ತೀರ್ವನದ ಹಿಂದೆ ಕಾಣದ ಕೈ ಇದೆ. | ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ ಗುಲಾಂ ನಬಿ ಆಜಾದ್ ಕುಂಟುನೆಪಗಳನ್ನು ಮುಂದಿಟ್ಟು ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವುದು ದುರದೃಷ್ಟಕರ ಬೆಳವಣಿಗೆ. ಇತ್ತೀಚಿನ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಕಾಂಗ್ರೆಸ್ ಕಷ್ಟದ ದಿನಗಳಲ್ಲಿದೆ. ಸರ್ವಾಧಿಕಾರಿ ಪ್ರಭುತ್ವದಿಂದಾಗಿ ದೇಶ ಕಷ್ಟದಲ್ಲಿದೆ. ರಾಹುಲ್ ಗಾಂಧಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ. ಇಂದಿರಾ, ರಾಜೀವ್, ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸಂಪುಟದಲ್ಲಿ ದೀರ್ಘಕಾಲ ಸಚಿವರಾಗಿದ್ದ ಆಜಾದ್ ಪಕ್ಷದ ವಿವಿಧ ಘಟಕಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ, ಸಂಸದೀಯ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಚುನಾವಣಾ ಸಮಿತಿಗಳಲ್ಲಿ ಅವಕಾಶ ಪಡೆದಿದ್ದರು. ಪಕ್ಷಕ್ಕೆ ಹೊಸರಕ್ತ ತುಂಬುವ ಪ್ರಯತ್ನದಲ್ಲಿ ಹಳೆಯ ತಲೆಗಳನ್ನು ಬದಲಾವಣೆ ಮಾಡುವುದು ಅನಿವಾರ್ಯವಾಗಿತ್ತು. ಈ ಬದಲಾವಣೆ ಕೂಡಾ ಪಕ್ಷದ ಒಟ್ಟು ನಿರ್ಧಾರವಾಗಿತ್ತು. | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ