

ಬೆಂಗಳೂರು: ಆಡಳಿತಾರೂಢ ಬಿಜೆಪಿ ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೂ ಪ್ರತಿಷ್ಠೆಯ ಸಮರವಾಗಿ ಮಾರ್ಪಟ್ಟಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಗೆ ಅಖಾಡ ಸಜ್ಜಾಗಿದೆ. ಎರಡೂ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಶಾಂತಿಯುತ ಮತದಾನದ ಸಂಕಲ್ಪ ತೊಟ್ಟು ಹದ್ದಿನ ಕಣ್ಣಿಟ್ಟಿದೆ. ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರವನ್ನು ಗಟ್ಟಿಗೊಳಿಸುವುದು ಬಿಜೆ ಪಿಯ ಆಶಯವಾಗಿದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಪಕ್ಷದ್ರೋಹ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕಾಂಗ್ರೆಸ್ನ ಪ್ರತಿತಂತ್ರವಾಗಿದೆ. ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಬಳಿಕ ಬಂದಿರುವ ಈ ಮೊದಲ ಚುನಾವಣೆ ಗೆಲ್ಲುವುದು ಡಿ.ಕೆ.ಶಿವಕುಮಾರ್ ಪಾಲಿಗೂ ಪ್ರತಿಷ್ಠೆಯಾಗಿದೆ. ರಾಷ್ಟ್ರೀಯ ಪಕ್ಷಗಳ ನೇರ ಹಣಾಹಣಿ ನಡುವೆಯೂ ಗೆಲುವು ಸಾಧಿಸುವುದು ಜೆಡಿಎಸ್ನ ತಂತ್ರಗಾರಿಕೆಯಾಗಿದೆ.