

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ, ಬರಹಗಾರ, ಪ್ರತಿಭಾವಂತ ನಟ ರಾಜ್ ಬಿ.ಶೆಟ್ಟಿ ಅಭಿನಯದ 'ಟೋಬಿ' ಚಿತ್ರವು ಆಗಸ್ಟ್ 25 ರಂದು ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಕನ್ನಡ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ, ಇದೀಗ ಮತ್ತೊಂದು ಭಾಷೆಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.
ಈ ಕುರಿತು ಸ್ವತಃ ರಾಜ್ ಬಿ.ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, 'ಟೋಬಿ' ಮಲಯಾಳಂ ಆವೃತ್ತಿ ಇದೇ ಸೆಪ್ಟಂಬರ್ 22 ರಂದು ಬಿಡುಗಡೆಯಾಗಲಿದೆ. ವೇಫರೇರ್ ತಂಡಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇಂದಿಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಟೋಬಿ' ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ದೊರೆತಿದೆ. ಚಿತ್ರದ ಒಟಿಟಿ ರಿಲೀಸ್ ಯಾವಾಗ ಎಂಬ ಪ್ರಶ್ನೆಗಳು ಸದ್ಯ ಸಿನಿಪ್ರೇಕ್ಷಕರಲ್ಲಿ ಮೂಡಿದ್ದು, ಈ ಬಗ್ಗೆ ಚಿತ್ರತಂಡದ ಅಧಿಕೃತ ಘೋಷಣೆಗೆ ಕಾಯಬೇಕಿದೆ.