ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ

20M.D.R.3
ಮದ್ದೂರು ತಾಲೂಕಿನ ಗೆಜ್ಜಲಗೆರೆ ಸೂರ್ಯೋದಯ ಕಾನ್ವೆಂಟ್ ಆವರಣದಲ್ಲಿ ಎಲ್‌ಕೆಜಿ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮ ನಡೆಸಲಾಯಿತು. ಎಸ್.ಕೆ.ಸುರೇಶ್, ಭಾಗ್ಯಸುರೇಶ್, ರಶ್ಮಿ, ಶ್ವೇತಾ, ಭುವನೇಶ್ವರಿ ಇದ್ದರು.
Published on

ಮದ್ದೂರು: ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಮಾನವೀಯ ಮೌಲ್ಯಗಳನ್ನು ಅವಳಡಿಸಿಕೊಳ್ಳುವ ಜತೆಗೆ ಸಂಸ್ಕಾರ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದ ಮಹತ್ತರವಾದ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ ಎಂದು ಸೂರ್ಯೋದಯ ಕಾನ್ವೆಂಟ್‌ನ ಸಂಸ್ಥಾಪಕ ಎಸ್.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಗೆಜ್ಜಲಗೆರೆ ಸೂರ್ಯೋದಯ ಕಾನ್ವೆಂಟ್ ಆವರಣದಲ್ಲಿ ಶುಕ್ರವಾರ ಎಲ್‌ಕೆಜಿ ಮಕ್ಕಳಿಗೆ ಅಕ್ಷರ ಅಭ್ಯಾಸ, 1ನೇ ತರಗತಿಯ ಮಕ್ಕಳಿಗೆ ಗ್ರಾಜುಯೇಷನ್ ಡೇ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳಾಗಿ ದೇಶವನ್ನು ಸುಭದ್ರವಾಗಿ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಪಾತ್ರ ಅತಿ ಮುಖ್ಯವಾಗಿದ್ದು, ಇದನ್ನರಿತು ಪಾಲಕರು, ಶಿಕ್ಷಕರು ಪ್ರಾಮಿಕ ಹಂತದಲ್ಲೇ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಪ್ರವೃತ್ತಿ ಬೆಳಸಿಕೊಳ್ಳಲು ಮಾರ್ಗದರ್ಶನ ನೀಡಬೇಕೆಂದರು.

ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಶಿಕ್ಷಣದತ್ತ ಗಮನ ಹರಿಸಿದರೆ ಜ್ಞಾನಾರ್ಜನೆ ಬೆಳಸಿಕೊಂಡು ದೇಶದ ಉತ್ತಮ ಪ್ರಜೆಗಳಾಗುತ್ತಾರೆ. ಪಾಲಕರು ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಲು ಪ್ರೇರೇಪಿಸುವಂತೆ ಮಾಡಿದರೆ ಉನ್ನತ ಮಟ್ಟದ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಾನವ ದುರಾಸೆಯಿಂದ ಅರಣ್ಯ ಸಂಪತ್ತು ಕಣ್ಮರೆಯಾಗುತ್ತಿದ್ದು, ಇದರಿಂದಾಗಿ ಪ್ರಸ್ತುತ ದಿನಗಳಲ್ಲಿ ಪ್ರಕೃತಿ ವಿಕೋಪದತ್ತ ಘಟನೆಗಳು ಜರುಗಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇದನ್ನರಿತು ಪ್ರತಿಯೊಬ್ಬರೂ ಗಿಡ ನೆಟ್ಟು ಕಾಡನ್ನು ಬೆಳೆಸಿ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಶಾಲಾ ಆವರಣದಲ್ಲಿ ಎಲ್‌ಕೆಜಿ ಮಕ್ಕಳಿಗೆ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪಾಲಕರು ತಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸ ನಡೆಸುವ ಜತೆಗೆ ಹಿಂದು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ತಾಯಿ ಭುನವೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪಾಲಕರಿಗೆ ಹಾಗೂ ನೆರೆದಿದ್ದ ಸ್ಥಳಿಯ ಸಾರ್ವಜನಿಕರಿಗೆ ಪರಿಸರ ಬಗ್ಗೆ ಅರಿವು ಮೂಡಿಸಲಾಯಿತು. ಟ್ರಸ್ಟಿ ಭಾಗ್ಯಾ ಸುರೇಶ್, ಶಿಕ್ಷಕರಾದ ರಶ್ಮಿ, ಶ್ವೇತಾ, ಭುವನೇಶ್ವರಿ, ಆಶಾ ಹಾಗೂ ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net