

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ವಿಷಕಾರಿ ಮದ್ಯ ದುರಂತದದಲ್ಲಿ 60 ಜನರು ಮೃತಪಟ್ಟಿದ್ದು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅಣ್ಣಾಮಲೈ ನೇತೃತ್ವದ ಬಿಜೆಪಿ ನಿಯೋಗ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, ವಿಷಕಾರಿ ಮದ್ಯ ಸೇವನೆ ದುರಂತದಲ್ಲಿ ಸುಮಾರು 60 ಮಂದಿ ಮೃತಪಟ್ಟಿದ್ದು, ತಮ್ಮ ಸಂಪುಟದಿಂದ ಅಬಕಾರಿ ಸಚಿವ ಎಸ್. ಮುತ್ತುಸ್ವಾಮಿ ಅವರನ್ನು ಕೈಬಿಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದಾರೆ.
ನಕಲಿ ಮಧ್ಯ, ಅಕ್ರಮ ಗಾಂಜಾದ ಪ್ರಕರಣಗಳನ್ನು ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.ಡಿಎಂಕೆ ಸರ್ಕಾರದ ಈ ನಿಷ್ಕಾಳಜಿಯಿಂದಾಗಿ ಕಲ್ಲಕುರಿಚಿಯಲ್ಲಿ 60 ಮಂದಿ ಅಕ್ರಮ ಅರಕ್‌ಗೆ ಬಲಿಯಾಗಿದ್ದೇವೆ.
ಡಿಎಂಕೆ ಸರ್ಕಾರದ ಈ ನಿರ್ಲಕ್ಷ್ಯದಿಂದ ಕಲ್ಲಕುರಿಯಲ್ಲಿ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದು ರಾಜ್ಯಪಾಲರಾದ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಈ ಅಕ್ರಮ ಜಾಲದ ಹಿಂದೆ ಯಾರಿದ್ದಾರೆ ಅವರನ್ನು ಪತ್ತೆಹಚ್ಚಲು ಸಿಬಿಐ ತನಿಖೆಗೆ ವಹಿಸುವಂತೆ ಮಡಲಾಯಿತು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅಬಕಾರಿ ಸಚಿವ ಎಸ್. ಮುತ್ತುಸ್ವಾಮಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ನ್ಯಾ.ಬಿ. ಗೋಕುಲದಾಸ್ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗದಿಂದ ತನಿಖೆ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ವಿಷಕಾರಿ ಮದ್ಯ ದುರಂತದ ಪ್ರಮುಖ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ವಿಷಕಾರಿ ಮದ್ಯಕ್ಕೆ ಬಲಿಯಾದ 55 ನಿವಾಸಿಗಳಿಂದ ಶೋಕದಲ್ಲಿರುವ ಕರುಣಾಪುರಂ ಗ್ರಾಮಕ್ಕೆ ಡಿಸ್ಟಿಲ್ಡ್ ಮದ್ಯವನ್ನು ಪೂರೈಸಿದವರು ಚಿನ್ನದೊರೈ ಎಂದು ಪೊಲೀಸರು ಹೇಳಿದ್ದಾರೆ. ನ್ಯಾಯಮೂರ್ತಿ ಬಿ. ಗೋಕುಲದಾಸ್ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗವು ಈ ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ. ವರದಿ ಸಲ್ಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದೆ.
ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ: ಅಕ್ರಮ ಮದ್ಯ ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಸ್ಟಾಲಿನ್ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹೆಚ್ಚುವರಿಯಾಗಿ, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50,000 ರೂ. ನೀಡಲಾಗುತ್ತದೆ. ಕಳ್ಳಭಟ್ಟಿ ದುರಂತದ ಬಗ್ಗೆ ಸಮಗ್ರ ತನಿಖೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಕಲ್ಲಕುರಿಚಿಯಲ್ಲಿ ಕಲಬೆರಕೆಯ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಈ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಈ ದುರಂತವನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.