

ಚಿತ್ತೂರು (ಆಂಧ್ರಪ್ರದೇಶ): ಕರೊನಾ ಸಾಮಾನ್ಯ ಜನರಿಗೆ ಸಂಕಷ್ಟ ಮಾತ್ರವಲ್ಲ, ಅಂತಾರಾಜ್ಯ ಹಗೆತನಕ್ಕೂ ಕಾರಣವಾಗುತ್ತಿದೆಯೇ ಎಂಬ ಅನುಮಾನಕ್ಕೂ ಹುಟ್ಟಿಕೊಂಡಿದೆ.
ಕೇರಳ- ಕರ್ನಾಟಕ ಗಡಿ ಹಂಚಿಕೊಳ್ಳುವ ಕೊಡಗು, ಮಂಗಳೂರು, ಮೈಸೂರು ಜಿಲ್ಲೆಯಲ್ಲಿ ಗಡಿ ರಸ್ತೆಯನ್ನು ಬಂದ್ ಮಾಡಿದ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಇಂಥದ್ದೇ ತಿಕ್ಕಾಟ ತಮಿಳುನಾಡು ಹಾಗೂ ಆಂಧ್ರಪ್ರದೇಶದ ನಡುವೆ ಏರ್ಪಟ್ಟಿದೆ.
ತಮಿಳುನಾಡಿನಲ್ಲಿ ಕರೊನಾ ಅಂಕೆಗೆ ಸಿಗದಂತೆ ಏರುತ್ತಿದೆ. ಹೀಗಾಗಿ ನೆರೆ ರಾಜ್ಯಗಳೊಂದಿಗಿನ ಗಡಿ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ತಮಿಳನಾಡಿನ ವೆಲ್ಲೂರು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಗುಡಿಯಾಟ್ಟಂ ಗ್ರಾಮದ ಬಳಿ ತಮಿಳುನಾಡು ಸರ್ಕಾರ ಗೋಡೆಯನ್ನೇ ನಿರ್ಮಿಸಿದೆ. ಮೂರು ಅಡಿ ಅಗಲ ಐದು ಅಡಿ ಎತ್ತರವಿರುವ ಎರಡು ಗೋಡೆಗಳನ್ನು ರಸ್ತೆಗಡ್ಡಲಾಗಿ ನಿಮಿರ್ಸಲಾಗಿದೆ. ಇದು ಆಂಧ್ರಪ್ರದೇಶ ಸರ್ಕಾರ ಕೆಂಗಣ್ಣಿಗೆ ಕಾರಣವಾಗಿದೆ.
ಜಿಲ್ಲೆಯವರು ನೆರೆಯ ವೆಲ್ಲೂರಿನೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆ. ಅದರಲ್ಲೂ ವೆಲ್ಲೂರು ಕ್ಯಾನ್ಸರ್ ಆಸ್ಪತ್ರೆಗೆ ನಿಯಮಿತವಾಗಿ ರೋಗಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಅಲ್ಲದೇ, ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಇಲ್ಲಿನ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಗೋಡೆಯನ್ನು ನಿರ್ಮಿಸಿರುವುದರಿಂದ ತುರ್ತು ಸೇವೆ ಹಾಗೂ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಚಿತ್ತೂರು ಜಂಟಿ ಜಿಲ್ಲಾಧಿಕಾರಿ ಮಾರ್ಕಂಡೇಯಲು ತಿಳಿಸಿದ್ದಾರೆ.
ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಗಡಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಗುಡಿಯಾಟ್ಟಂ ಮಾತ್ರವಲ್ಲದೇ, ಇನ್ನೂ ಆರು ಹಳ್ಳಿಗಳಲ್ಲಿ ರಸ್ತೆಗಡ್ಡವಾಗಿ ಕಲ್ಲುಗಳನ್ನಿಟ್ಟು ಸಂಚಾರ ನಿರ್ಬಂಧಿಸಲಾಗಿದೆ ಎಂದು ವೆಲ್ಲೂರು ಅಧಿಕಾರಿಗಳು ಹೇಳಿದ್ದಾರೆ. ಅಗತ್ಯ ಹಾಗೂ ತುರ್ತು ಸೇವೆಗಳಿಗಾಗಿ ಪರ್ಯಾಯ ಮಾರ್ಗಗಳಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ 1,885ಕ್ಕೆ ಏರಿದ್ದರೆ, ಆಂಧ್ರದಲ್ಲಿ 1,097 ಪ್ರಕರಣಗಳು ವರದಿಯಾಗಿವೆ.