'ಕೈ..ಕಾಲು..ಪಕ್ಕೆಲುಬು ಮುರಿಯುತ್ತೇವೆ...ಸ್ಮಶಾನಕ್ಕೆ ಕಳಿಸುತ್ತೇವೆ': ಬಿಜೆಪಿ ನಾಯಕನ ಖಡಕ್​ ವಾರ್ನಿಂಗ್​

Dileep Ghosh
Published on

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವಿನ ಗುದ್ದಾಟ ಬಹಿರಂಗವಾಗಿಯೇ ನಡೆಯುತ್ತಿದೆ. ಅಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಟಿಎಂಸಿ ಗೂಂಡಾಗಳೇ ಕಾರಣ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಲೇ ಇದ್ದಾರೆ.

ಇದೀಗ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಅವರು ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರಿಗೆ ಖಡಕ್​ ಎಚ್ಚರಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಪೂರ್ವ ಮಿಡ್ನಾಪೋರ್​ ಜಿಲ್ಲೆಯ ಹಲ್ದಿಯಾ ಟೌನ್​​ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿಲೀಪ್​ ಘೋಷ್​, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಜನರೊಂದಿಗೆ ಇದೆ. ಇಲ್ಲಿನ ವಿಧಾನಸಭೆ ಚುನಾವಣೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. ಯಾವುದೇ ಹೆದರಿಕೆ ಇಲ್ಲದೆ ಇಲ್ಲಿನ ಜನರು ಮತ ಚಲಾವಣೆ ಮಾಡಲು ಅನುಕೂಲ ಕಲ್ಪಿಸಲಾಗುವುದು ಎಂದು ದಿಲೀಪ್​ ಘೋಷ್​ ತಿಳಿಸಿದರು. ಇದನ್ನೂ ಓದಿ: ನನ್ನ ಫಾಲೋ ಮಾಡಿದ್ರೆ ಚೆನ್ನಾಗಿರಲ್ಲ … ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?

ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯಂದು ರಾಜ್ಯ ಪೊಲೀಸರ ಭದ್ರತೆಯ ಬದಲು ಕೇಂದ್ರೀಯ ರಕ್ಷಣಾ ಪಡೆಗಳ ಬಿಗಿ ಭದ್ರತೆ ಇರುತ್ತದೆ. ಗೂಂಡಾಗಿರಿ ಮಾಡುತ್ತಿರುವ ಟಿಎಂಸಿ ಕೇಡರ್​ಗಳು ತಮ್ಮ ದಾರಿ ಸರಿಪಡಿಸಿಕೊಳ್ಳದೆ ಇದ್ದಲ್ಲಿ, ಸಾಮಾನ್ಯ ಜನರಿಗೆ ಹಿಂಸೆ ಮಾಡುವುದನ್ನು ಬಿಡದೆ ಇದ್ದಲ್ಲಿ ಅವರನ್ನು ಸ್ಮಶಾನಕ್ಕೆ ಕಳಿಸಲಾಗುವುದು ಎಂದು ವಿವಾದಾತ್ಮಕ ಎಚ್ಚರಿಕೆ ನೀಡಿದ್ದಾರೆ.

ಗೂಂಡಾಗಿರಿ ತೋರುತ್ತಿರುವ ಟಿಎಂಸಿ ಕಾರ್ಯಕರ್ತರಿಗೆ ಇನ್ನು ಆರು ತಿಂಗಳು ಸಮಯ ನೀಡಲಾಗುತ್ತದೆ. ಅಷ್ಟರಲ್ಲಿ ಅವರು ತಪ್ಪು ಸರಿ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕೈ, ಕಾಲು, ಪಕ್ಕೆಲುಬುಗಳನ್ನು ಮುರಿದು, ಆಸ್ಪತ್ರೆಗೆ ಸೇರಿಸಲಾಗುವುದು. ಅಷ್ಟಾದರೂ ತಮ್ಮ ದುಷ್ಕೃತ್ಯಗಳನ್ನು ಮುಂದುವರಿಸಿದರೆ ಖಂಡಿತವಾಗಿಯೂ ಸ್ಮಶಾನಕ್ಕೆ ಕಳಿಸಲಾಗುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.  ಇದನ್ನೂ ಓದಿ: ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಅರ್ನಬ್​ಗೆ ಹೈಕೋರ್ಟ್​ನಿಂದ ಸಿಕ್ಕಿಲ್ಲ ಜಾಮೀನು

ದಿಲೀಪ್ ಘೋಷ್​ ಅವರ ಈ ಮಾತುಗಳಿಗೆ ಟಿಎಂಸಿ ಕಟು ಪ್ರತಿಕ್ರಿಯೆ ನೀಡಿದೆ. ಬಿಜೆಪಿ ದ್ವೇಷಯುತ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net