ತಿರುಪತಿ ದೇವಾಲಯ ಶುದ್ಧೀಕರಣ: ಭಕ್ತರು ಆತಂಕ ಪಡಬೇಕಿಲ್ಲ ಎಂದ ಮುಖ್ಯ ಅರ್ಚಕ ಕೃಷ್ಣ ಶೇಷಾಚಲ

tirumala
Published on

ಹೈದರಾಬಾದ್: ಲಡ್ಡು ಕಲಬೆರಕೆ ಪ್ರಕರಣದಿಂದ ವಿವಾದಕ್ಕೀಡಾಗಿದ್ದಲ್ಲದೆ, ಅಪವಿತ್ರಗೊಳಿಸಲಾಗಿದೆ ಎಂಬ ಆರೋಪಕ್ಕೂ ಒಳಗಾಗಿರುವ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ಶುದ್ಧೀಕರಣ ನಡೆಸಲಾಗಿದೆ. ಅದರ ಅಂಗವಾಗಿ ಅರ್ಚಕರ ದೊಡ್ಡ ಸಮೂಹ ಮಹಾ ಶನಿಹೋಮ ನಡೆಸಿದೆ.

‘ಎಲ್ಲವೂ ಶುದ್ಧಗೊಂಡಿದೆ, ಭಕ್ತರು ಇನ್ನು ಆತಂಕ ಪಡಬೇಕಾಗಿಲ್ಲ. ದರ್ಶನ ಪಡೆದು ಮನೆಗೆ ಪ್ರಸಾದ ತೆಗೆದುಕೊಂಡು ಹೋಗಿ’ ಎಂದು ಶುದ್ಧೀಕರಣದ ಬಳಿಕ ಮುಖ್ಯ ಅರ್ಚಕರಲ್ಲಿ ಒಬ್ಬರಾದ ಕೃಷ್ಣ ಶೇಷಾಚಲ ದೀಕ್ಷಿತುಲು ಹೇಳಿದ್ದಾರೆ. ‘ಮಹಾ ಶನಿಹೋಮವು ಕಲಬೆರಕೆಯ ನಕಾರಾತ್ಮಕ ಅಂಶಗಳನ್ನು ತೊಲಗಿಸಿ, ಪ್ರಸಾದದ ಪಾವಿತ್ರ್ಯ ಮರುಕಳಿಸುವಂತೆ ಮಾಡುತ್ತದೆ’ ಎಂದು ದೇವಳದ ಅಧಿಕಾರಿಗಳು ತಿಳಿಸಿದ್ದಾರೆ. ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದದಲ್ಲಿ ದನ-ಹಂದಿಯ ಕೊಬ್ಬು, ಮೀನೆಣ್ಣೆ ಇತ್ಯಾದಿ ಪದಾರ್ಥಗಳಿದ್ದವು ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಈ ಶುದ್ಧೀಕರಣ ನಡೆದಿದೆ.

‘ಬೆಳಗ್ಗೆ 6 ಗಂಟೆಗೆ ಆರಂಭವಾದ ಶುದ್ಧೀಕರಣ ಕಾರ್ಯ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು. ಲಡ್ಡು ತಯಾರಿಸುವ ಅಡುಗೆ ಮನೆಯನ್ನು ಕೇಂದ್ರೀಕರಿಸಿ ಈ ಶುದ್ಧೀಕರಣ ನಡೆಸಲಾಯಿತು. ಶುದ್ಧ ಹಸುವಿನ ತುಪ್ಪವನ್ನು ಖರೀದಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಇದರಿಂದ ಲಡ್ಡು ಹಾಗೂ ಇತರ ಪ್ರಸಾದಗಳ ರುಚಿ ಕೂಡ ವೃದ್ಧಿಸಿದೆ’ ಎಂದು ದೇವಸ್ಥಾನವನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ತಿಳಿಸಿದ್ದಾರೆ.

ಸುಪ್ರೀಂ ನಿಗಾದಲ್ಲೇ ತನಿಖೆ ಆಗಲಿ

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎನ್ನುವ ಪ್ರಕರಣದ ಕುರಿತು ಸವೋಚ್ಚ ನ್ಯಾಯಾಲಯದ ನಿಗಾದಲ್ಲೇ ತನಿಖೆ ಆಗಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಲಡ್ಡು ತಯಾರಿಗೆ ಬಳಸಲಾದ ತುಪ್ಪದ ಮೂಲ ಮತ್ತು ಮಾದರಿ ಕುರಿತು ವಿಸõತ ವರದಿ ಸಲ್ಲಿಸುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸಂಬಂಧಿತ ಅಧಿಕಾರಿಗಳಿಂದ ವಿವರವಾದ ವಿಧಿವಿಜ್ಞಾನ ವರದಿ ಪಡೆಯುವಂತೆ ಮಧ್ಯಂತರ ನಿರ್ದೇಶನ ನೀಡಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.

ಸ್ವತಂತ್ರ ತನಿಖಾ ಸಮಿತಿ ರಚನೆಗೆ ಮನವಿ

ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಮಿತಿ ರಚಿಸಿ ಲಡ್ಡು ಕಲಬೆರಕೆ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಮ್್ಸ (ಟಿಟಿಡಿ) ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರು ಸುಪ್ರೀಂಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಾರೆ.

ವರದಿ ಬಳಿಕ ನಿರ್ಧಾರ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್​ಎಸ್​ಎಸ್​ಎಐ)ದ ವರದಿ ಬಂದ ಬಳಿಕವಷ್ಟೇ ಮಾರುಕಟ್ಟೆಯಲ್ಲಿನ ತುಪ್ಪದ ಗುಣಮಟ್ಟದ ಬಗ್ಗೆ ನಿಗಾ ಇರಿಸಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಕುರಿತು ಪರಿಗಣಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. ಎಫ್​ಎಸ್​ಎಸ್​ಎಐ ಕ್ರಮಕೈಗೊಳ್ಳುವ ಕುರಿತು ನಾವು ಎದುರು ನೋಡುತ್ತಿದ್ದೇವೆ. ಎಫ್​ಎಸ್​ಎಸ್​ಎಐ ವರದಿಗೆ ಕಾಯುತ್ತಿದ್ದೇವೆ. ಆ ವರದಿ ಬಳಿಕ ಹಾಗೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರುಗಳು ಬಂದಿದ್ದು, ಅಗತ್ಯವಾದರೆ ನಾವೂ ಹೆಚ್ಚಿನ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತುಪ್ಪ ಪೂರೈಸಿದ್ದ ಕಂಪನಿಗೆ ಶೋಕಾಸ್ ನೋಟಿಸ್

ತಿರುಪತಿ ದೇವಸ್ಥಾನಕ್ಕೆ ಕಳಪೆ ತುಪ್ಪ ಸರಬರಾಜು ಮಾಡಿದ್ದ ತಮಿಳುನಾಡು ಮೂಲದ ಎ.ಆರ್.ಡೇರಿ ಫುಡ್ ಪ್ರೖೆವೇಟ್ ಲಿಮಿಟೆಡ್ ಕಂಪನಿಗೆ ಲಡ್ಡು ಕಲಬೆರಕೆ ಪ್ರಕರಣ ಹಿನ್ನೆಲೆಯಲ್ಲಿ ಎಫ್​ಎಸ್​ಎಸ್​ಎಐ ಸೋಮವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪರವಾನಗಿ ಯಾಕೆ ಅಮಾನತು ಗೊಳಿಸಬಾರದು ಎಂದು ಪ್ರಶ್ನಿಸಿದೆ.

ಹೊರಗಿನಿಂದ ನೈವೇದ್ಯಕ್ಕಾಗಿ ತಂದ ವಸ್ತು ನಿಷೇಧ

ಲಖನೌ: ಉತ್ತರಪ್ರದೇಶದ ಲಖನೌದಲ್ಲಿನ ಶ್ರೀಮನಕಾಮೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಹೊರಗಿನಿಂದ ನೈವೇದ್ಯಕ್ಕಾಗಿ ತರುವ ವಸ್ತುಗಳನ್ನು ನಿಷೇಧಿಸಲಾಗಿದೆ. ಆದರೆ ಹಣ್ಣುಗಳನ್ನು ತರಬಹುದು ಎಂದು ದೇವಸ್ಥಾನ ಆಡಳಿತ ತಿಳಿಸಿದೆ.

ತಿರುಪತಿ ದೇವಸ್ಥಾನದಲ್ಲಿ ಕಲಬೆರಕೆ ಲಡ್ಡು ಪ್ರಸಾದ ಹಂಚಿದ್ದು ಅಕ್ಷಮ್ಯ ಅಪರಾಧ ಎಂದು ಶ್ರೀಮನಕಾಮೇಶ್ವರ ದೇವಸ್ಥಾನದ ಮಹಾಂತ ದೆವ್ಯ ಗಿರಿ ಹೇಳಿದ್ದಾರೆ. ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಪ್ರಕರಣದ ಹಿನ್ನೆಲೆಯಲ್ಲಿ ನಾವು ನಮ್ಮ ದೇವಳದ ಭಕ್ತರು ಪ್ರಸಾದಕ್ಕಾಗಿ ನೀಡುವ ಪದಾರ್ಥಗಳಲ್ಲಿ ಯಾವುದೇ ಮಾಂಸಾಹಾರ ಪದಾರ್ಥ ಇರದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದೇವೆ. ಅಲ್ಲದೇ, ಭಕ್ತರು ಮನೆಯಲ್ಲಿ ಮಾಡಿದ ತುಪ್ಪದಿಂದ ಮಾಡಿದ ಪ್ರಸಾದ ಇಲ್ಲವೇ ಹಣ್ಣು-ಡ್ರೖೆಫ್ರುಟ್ಸ್ ತರುವುದು ಒಳಿತು ಎಂದೂ ಸಲಹೆ ನೀಡಿದ್ದಾಗಿ ಅವರು ಹೇಳಿದ್ದಾರೆ.

ಕಾಲಮಿತಿಯೊಳಗೆ ಆರೋಪಿಗಳ ಪತ್ತೆ ಆಗಲಿ

ತಿರುಪತಿ: ಲಡ್ಡು ಕಲಬೆರಕೆ ಕುರಿತ ಆರೋಪಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಕಾಲಮಿತಿಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್​ಗೆ ವಿಶ್ವ ಹಿಂದು ಪರಿಷತ್ ಮನವಿ ಮಾಡಿಕೊಂಡಿದೆ. ವಿಎಚ್​ಪಿ ಕೇಂದ್ರೀಯ ಮಾರ್ಗದರ್ಶಕ ಮಂಡಲವು ತಿರುಪತಿಯಲ್ಲಿ ಭೇಟಿಯಾದ ಬಳಿಕ ಈ ನಿರ್ಧಾರ ತಳೆದಿದೆ. ವಿಎಚ್​ಪಿ ಅಂತಾರಾಷ್ಟ್ರೀಯ ಕಾರ್ಯದರ್ಶಿ ಬಜರಂಗ್ ಬಾಗ್ರಾ ಸೇರಿ ಇತರ ಮಠಾಧೀಶರು ಈ ವೇಳೆ ಉಪಸ್ಥಿತರಿದ್ದರು. ಲಡ್ಡು ಕಲಬೆರಕೆ ಆರೋಪಗಳು ಶ್ರೀವೆಂಕಟೇಶ್ವರ ಸ್ವಾಮಿ ಭಕ್ತರನ್ನು ಭಾರಿ ಅವಮಾನಕ್ಕೆ ಈಡುಮಾಡಿದೆ ಎಂದು ವಿಎಚ್​ಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net