

ಹೈದರಾಬಾದ್: ತಿರುಪತಿ ವೆಂಕಟೇಶ್ವರ ದೇವಾಲಯದ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ವಿವಾದ ವಿವಿಧ ಆಯಾಮ ಪಡೆಯುತ್ತಿರುವುದರ ನಡುವೆ, ಕಳೆದ ನಾಲ್ಕು ದಿನದಲ್ಲಿ 14 ಲಕ್ಷಕ್ಕೂ ಅಧಿಕ ಲಡ್ಡುಗಳು ಮಾರಾಟವಾಗಿವೆ.
ಸೆಪ್ಟೆಂಬರ್ 19ರಂದು 3.59 ಲಕ್ಷ, 20ರಂದು 3.17 ಲಕ್ಷ, 21ರಂದು 3.67 ಲಕ್ಷ ಮತ್ತು 22ರಂದು 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ ಎಂದು ಪ್ರತಿದಿನ 60,000ಕ್ಕೂ ಅಧಿಕ ಭಕ್ತರು ಭೇಟಿ ನೀಡುವ ಮಂದಿರದ ಅಧಿಕಾರಿಗಳು ತಿಳಿಸಿದ್ದಾರೆ. ದೈನಿಕ ಸರಾಸರಿ 3.50 ಲಕ್ಷ ಲಡ್ಡು ಮಾರಾಟಕ್ಕೆ ಇದು ಸಮನಾಗಿದೆ. ದೇವಾಲಯದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಲಾಗುತ್ತದೆ. ಭಕ್ತರು ತಮ್ಮ ಮಿತ್ರರು ಮತ್ತು ಕುಟುಂಬಸ್ಥರಿಗೆ ನೀಡಲು ದೊಡ್ಡ ಪ್ರಮಾಣದಲ್ಲಿ ಲಡ್ಡು ಪ್ರಸಾದವನ್ನು ಖರೀದಿಸುತ್ತಾರೆ.
ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿರುವುದರಿಂದ ತಿರುಪತಿ ದೇವಸ್ಥಾನ ಕಳೆದ ಕೆಲವು ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿದೆ. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ. ತಿರುಪತಿ ಲಡ್ಡು ತಯಾರಿಸಲು ಕಡ್ಲೆ ಬೇಳೆ, ತುಪ್ಪ, ಸಕ್ಕರೆ, ಒಣ ದ್ರಾಕ್ಷಿ ಮತ್ತು ಬಾದಾಮಿಯನ್ನು ಬಳಸಲಾಗುತ್ತದೆ. ಆದರೆ ಜಗನ್ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಇರುವ ತುಪ್ಪ ಬಳಕೆ ಆಗಿದೆ ಎಂಬುದು ಆರೋಪವಾಗಿದೆ.
ಲಡ್ಡು ವಿವಾದದ ಹಿನ್ನೆಲೆಯಲ್ಲಿ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಏಕಾಏಕಿ ಕುಸಿದು ಮತ್ತೆ ಯಥಾಸ್ಥಿತಿಗೆ ಬಂದಿದೆ. ತುಪ್ಪ ಕಲಬೆರಕೆ ಕುರಿತು ಸಿಎಂ ಚಂದ್ರಬಾಬು ನಾಯ್ಡು ಆರೋಪದ ನಂತರ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಿತ್ತು. ಸೆಪ್ಟೆಂಬರ್ 18ರಂದು 78,690 ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದರು. ಆ ದಿನ ಸಂಜೆ ನಾಯ್ಡು ಆರೋಪ ಮಾಡಿದ್ದರು. ಸೆ. 19ರಂದು ಯಾತ್ರಿಗಳ ಸಂಖ್ಯೆ 68,835 ಆಗಿತ್ತು. ಆದರೆ, 20ರಂದು 73,104 ಭಕ್ತರು ದರ್ಶನಕ್ಕಾಗಿ ಪ್ರಖ್ಯಾತ ದೇವಾಲಯಕ್ಕೆ ಆಗಮಿಸಿದ್ದರು. 21ರಂದು 82,406, 22ರಂದು 82,646 ಭಕ್ತರು ಭೇಟಿ ಕೊಟ್ಟಿದ್ದರು.
ತಿರುಪತಿ ಪ್ರಸಾದದಲ್ಲಿ ಗುಟ್ಖಾ ಮತ್ತು ತಂಬಾಕಿನ ಅಂಶಗಳು ಕಂಡುಬಂದಿದೆಯೆಂದು ಭಕ್ತ ರೊಬ್ಬರು ಆರೋಪಿಸುವ ಮೂಲಕ ತಿರುಪತಿ ಲಡ್ಡು ವಿವಾದಕ್ಕೆ ಇನ್ನೊಂದು ತಿರುವು ಬಂದಿದೆ. ಸೆಪ್ಟೆಂಬರ್ 19ರಂದು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ತಮಗೆ ಪ್ರಸಾದದಲ್ಲಿ ತಂಬಾಕಿನ ಅಂಶ ಸಿಕ್ಕಿದೆ ಎಂದು ಖಮ್ಮಮ್ ಜಿಲ್ಲೆಯ ನಿವಾಸಿ ದೊಂತು ಪದ್ಮಾವತಿ ಎನ್ನು ವವರು ಹೇಳಿದ್ದಾರೆ. ತಿರುಪತಿ ದೇವಸ್ಥಾನ ಮಂಡಳಿಗೆ ಕಲಬೆರಕೆ ತುಪ್ಪ ಪೂರೈಕೆ ಮಾಡಿತ್ತೆನ್ನ ಲಾದ ತಮಿಳುನಾಡು ಮೂಲದ ಕಂಪನಿ ಎ.ಆರ್. ಡೈರಿ ಫುಡ್ಗೆ ಭಾರತೀಯ ಆಹಾರ ಸುರಕ್ಷತೆ, ಮಾನಕಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಮುಂಬೈ: ತಿರುಪತಿ ಲಡ್ಡು ವಿವಾದ ಇನ್ನೂ ಜೀವಂತವಾಗಿರುವಾಗ ಪ್ರಖ್ಯಾತ ಸಿದ್ಧಿವಿನಾಯಕ ದೇವಸ್ಥಾನದ ಪ್ರಸಾದ ಪ್ಯಾಕೆಟ್ಗಳ ಮೇಲೆ ಇಲಿಗಳು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದರಿಂದ ಭಕ್ತರಲ್ಲಿ ಆತಂಕ ಉಂಟಾಗಿದೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ದೇವಸ್ಥಾನದ ಟ್ರಸ್ಟ್, ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಪ್ರತಿ ದಿನ ಲಕ್ಷಾಂತರ ಲಡ್ಡುಗಳನ್ನು ವಿತರಿಸಲಾಗುತ್ತಿದೆ. ಅವುಗಳನ್ನು ತಯಾರಿಸುವ ಸ್ಥಳ ತುಂಬಾ ಶುದ್ಧವಾಗಿದೆ ಎಂದು ಶಿವಸೇನೆ ನಾಯಕ ಹಾಗೂ ಮಂದಿರ ಟ್ರಸ್ಟ್ ಅಧ್ಯಕ್ಷ ಸದಾ ಸರ್ವಂಕರ್ ಮಂಗಳವಾರ ಹೇಳಿದ್ದಾರೆ. ಇಲಿಗಳು ನೀಲಿ ಟ್ರೇಯೊಂದರಲ್ಲಿ ಇಟ್ಟ ಹರಿದ ಪ್ರಸಾದ ಪ್ಯಾಕೆಟ್ಗಳ ಮೇಲೆ ಓಡಾಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಏನಿದ್ದರೂ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತೇವೆ. ಡಿಸಿಪಿ ರ್ಯಾಂಕ್ನ ಅಧಿಕಾರಿಯೊಬ್ಬರನ್ನು ತನಿಖೆಗೆ ನೇಮಿಸಲಾಗುತ್ತದೆ ಎಂದು ಸರ್ವಂಕರ್ ತಿಳಿಸಿದ್ದಾರೆ.
ಈ ನಡುವೆ, ತಿರುಪತಿ ಲಡ್ಡುಗೆ ಸಂಬಂಧಿಸಿದ ವಿವಾದದ ಕುರಿತು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾಗ ಇನ್ನೊಂದು ವಿವಾದವನ್ನು ಹುಟ್ಟುಹಾಕಿರುವ ಜನಪ್ರಿಯ ತಮಿಳು ಸಿನಿಮಾ ನಿರ್ದೇಶಕ ಮೋಹನ್ ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಸ್ಥಾನದಲ್ಲಿ ನೀಡುವ ಪ್ರಸಾದ ‘ಪಂಚಮಿರ್ದಮ್ನಲ್ಲಿ ಪುರುಷರ ಲೈಂಗಿಕ ಶಕ್ತಿ ಕುಂದಿಸುವ ಔಷಧಿಯನ್ನು ಬೆರೆಸಲಾಗುತ್ತಿತ್ತು ಎಂದು ಮೋಹನ್ ಹೇಳಿದ್ದರು. ಔಷಧಿ ಬೆರೆಸುವ ಸುದ್ದಿಯನ್ನು ಮುಚ್ಚಿಹಾಕಲಾಗಿದ್ದು ಪಂಚಮಿರ್ದಮ್ ಅನ್ನು ನಾಶ ಮಾಡಲಾಗಿದೆ ಎಂದು ಮೋಹನ್ ಆಪಾದಿಸಿದ್ದರು. ದ್ರೌಪತಿ, ರುದ್ರತಾಂಡವಂ ಮತ್ತು ಬಕಾಸುರನ್ ಮುಂತಾದ ಸಿನಿಮಾಗಳಿಂದ ಮೋಹನ್ ಪ್ರಖ್ಯಾತರಾಗಿದ್ದಾರೆ.