ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಂಭ್ರಮದ ತಿರು ಓಣಂ ಆಚರಣೆ

D.29 MDG 2P1
ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ನಿವಾಸಿಯೊಬ್ಬರು ಓಣಂ ಅಂಗವಾಗಿ ರಚಿಸಿರುವ ರಂಗೋಲಿ.
Published on

ಮೂಡಿಗೆರೆ: ತಾಲೂಕಿನ ಮಲೆಯಾಳಿ ಭಾಷಿಕರು ಮಂಗಳವಾರ ತಾಲೂಕಿನಾದ್ಯಂತ ತಿರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ ಮನೆಯಂಗಳದಲ್ಲಿ ಸುಂದರ ರಂಗೋಲಿ ಬಿಡಿಸಿ ವಿವಿಧ ರೀತಿಯಲ್ಲಿ ಪೂಜೆ ನೇರವೇರಿಸಿ ಹೊಸ ವಸ್ತ್ರ ಧರಿಸಿ ಸಂಭ್ರಮಿಸಿದರು. ಪಟ್ಟಣ ಸೇರಿದಂತೆ ಬಿಳಗುಳ, ಹ್ಯಾಂಡ್‌ಪೋಸ್ಟ್, ಕೃಷ್ಣಾಪುರ, ಗೋಣಿಬೀಡು, ಜನ್ನಾಪುರ, ಮತ್ತಿತರೆ ಗ್ರಾಮಗಳಲ್ಲಿ ಓಣಂ ಹಬ್ಬ ವನ್ನು ಸಂಭ್ರಮದಿಂದ ಆಚರಿಸಿದರು.
ಹಿರಣ್ಯಕಷ್ಯಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಕೇರಳ ರಾಜ್ಯವನ್ನು ಆಳುತ್ತಿದ್ದಾಗ. ಮೋಸ, ವಂಚನೆಗೆ ಅವಕಾಶ ನೀಡುತ್ತಿರಲಿಲ್ಲ. ಬಲಿಚಕ್ರವರ್ತಿ ಆಳ್ವಿಕೆ ಭೂಮಂಡಲದಲ್ಲಿ ಮಾತ್ರವಲ್ಲದೆ ಮೂರು ಲೋಕದಲ್ಲಿ ಪ್ರಶಂಸೆಗೂಳಗಾಗಿತ್ತು. ಅವರ ಆಡಳಿತ ವೈಖರಿಗೆ ದೇವತೆಗಳೂ ಅಸೂಯೆ ಪಟ್ಟಿದ್ದರು. ಪ್ರಜೆಗಳು ರಾಜನನ್ನು ಆರಾಧಿಸುವ ಪರಿಯಿಂದ ದೇವತೆಗಳಿಗು ಸಹಿಸಲಾಗಲಿಲ್ಲ. ಬಲಿಚಕ್ರವರ್ತಿಯನ್ನು ಜನ ಆರಾಧಿಸುತ್ತಿದ್ದರೆ ನಮಗೂ ಉಳಿಗಾಲವಿಲ್ಲ. ಎಂಬ ಭಯದಲ್ಲಿ ದೇವಾನುದೇವತೆಗಳು ಒಂದಾಗಿ ಬಲಿಚಕ್ರವರ್ತಿಯನ್ನು ಮಟ್ಟ ಹಾಕಲು ತೀರ್ಮಾನಿಸಿದರು.
ಅದಕ್ಕೊಂದು ಉಪಾಯ ಸೂಚಿಸುವಂತೆ ದೇವತೆಗಳ ರಾಜನಾದ ವಿಷ್ಣುವಿನ ಮೊರೆ ಹೋಗಬೇಕಾಯಿತು. ಆಗ ವಿಷ್ಣುದೇವ, ದೇವತೆಗಳ ಆಗ್ರಹಕ್ಕೆ ಮಣಿದು ಬಲಿಚಕ್ರವರ್ತಿ ಆಡಳಿತದ ಅಂತ್ಯಕ್ಕೆ ತಂತ್ರ ರೂಪಿಸಿ ವಾಮನನ್ನು ಓರ್ವ ಕುಬ್ಜ ಬ್ರಾಹ್ಮಣ ರೂಪದಲ್ಲಿ ಚಕ್ರವರ್ತಿಯ ಬಳಿಗೆ ಕಳುಹಿಸಿಕೊಟ್ಟನು. ಮಹಾವಿಷ್ಣುವಿನ ಆದೇಶದಂತೆ ವಾಮನ ಬಲಿಚಕ್ರವರ್ತಿ ಸಮೀಪ ಬಂದು ವರವನ್ನು ಕೇಳುತ್ತಾನೆ. ಪ್ರಜೆಗಳ ಸರ್ವ ಬೇಡಿಕೆ ಈಡೇರಿಸುತ್ತಿದ್ದ ಚಕ್ರವರ್ತಿ ವಾಮನನಲ್ಲಿ ಏನುಬೇಕೆಂದು ಕೇಳಿದಾಗ ನನಗೆ 3 ಅಡಿ ಜಾಗ ಕೊಡಿ ಎಂದು ಕೇಳುತ್ತಾನೆ.
ಚಕ್ರವರ್ತಿ ವಾಮನ ಬೇಡಿಕೆ ಪೂರೈಸುವ ಭರವಸೆ ನೀಡುತ್ತಿದ್ದಂತೆ ಕುಬ್ಜನ ರೂಪದಲ್ಲಿದ್ದ ವಾಮನ ಬೃದಾಕಾರವಾಗಿ ಬೆಳೆದು ಮೊದಲ ಹೆಜ್ಜೆಯಿಟ್ಟು ಇಡೀ ಭೂಮಂಡಲ ಆವರಿಸಿದ, 2ನೇ ಹೆಜ್ಜೆಯಲ್ಲಿ ಸಾಗರೋಪಾದಿಯಾಗಿ ಎಲ್ಲವನ್ನೂ ಆಕ್ರಮಿಸಿಕೊಳ್ಳುವಷ್ಟರಲ್ಲಿ ಬಲಿ ಚಕ್ರವರ್ತಿಗೆ ಷಡ್ಯಂತ್ರ ಅರಿವಿಗೆ ಬಂತು. 3ನೇ ಹೆಜ್ಜೆ ಎಲ್ಲಿ ಇಡಲಿ ಎಂದು ಚಕ್ರವರ್ತಿ ಬಳಿ ಕೇಳಿದಾಗ ಬಲಿಚಕ್ರವರ್ತಿ ತನ್ನ ಶಿರವನ್ನು ತೋರಿಸಿ ಬೇಡಿಕೆ ಇಡುತ್ತಾನೆ. ವರ್ಷಕ್ಕೊಮ್ಮೆ ನನ್ನ ಪ್ರಜೆಗಳನ್ನು ಭೇಟಿಮಾಡುವ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಾನೆ.
ವಿಷ್ಣುವಿನ ಒಪ್ಪಿಗೆಯಂತೆ ವಾಮನ ಬಲಿಚಕ್ರವರ್ತಿಯ ಬೇಡಿಕೆಗೆ ಅವಕಾಶ ನೀಡುತ್ತಾನೆ. ಬಲಿಚಕ್ರವರ್ತಿ ಭೂಮಿಗೆ ಬರುವ 10ದಿನ ನಡೆಯುವ ಓಣಂ ಹಬ್ಬದಲ್ಲಿ ಕೇರಳಿಗರು ಬಲಿಚಕ್ರವರ್ತಿಗೆ ತೋರಿಸಲೆಂದೇ ಹೊಸಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net