ಮಾಜಿ ಪ್ರಿಯತಮೆ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆ

Crime Logo
Published on

ಬೆಂಗಳೂರು: ಮಾಜಿ ಪ್ರಿಯತಮೆಯ ಕಾಟಕ್ಕೆ ಬೇಸತ್ತ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.


ರಾಮಮೂರ್ತಿ ನಗರದ ನಿವಾಸಿ ಸಂತೋಷ್ ದೊಡ್ಡಮನಿ (೨೮) ಆತ್ಮಹತ್ಯೆ ಮಾಡಿಕೊಂಡವನು. ಆತನ ಸಹೋದರ ಸುಭಾಷ್ ನೀಡಿದ ದೂರಿನನ್ವಯ ಇಬ್ಬರು ಯುವತಿಯ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಬಿ.ಪಿ.ಓ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, ಅದೇ ಕಂಪನಿಯ ವರ್ಷಾ ಎಂಬ ಯುವತಿಯನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಕೆಲ ತಿಂಗಳುಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಆ ಪ್ರೀತಿ ಮುರಿದು ಬಿದ್ದಿತ್ತು. ಬಳಿಕ ಇಬ್ಬರು ದೂರವಾಗಿದ್ದರು. ನಂತರ ಅದೇ ಕಂಪನಿಯ ಮತ್ತೊಬ್ಬ ಯುವತಿ ದಾನೇಶ್ವರಿ ಎಂಬಾಕೆಯನ್ನು ಸಂತೋಷ್ ಪ್ರೀತಿಸಲಾರಂಭಿಸಿದ್ದ. ಹೊಸ ಪ್ರಿಯತಮೆಯೊಂದಿಗೆ ಸಂತೋಷ್ ಓಡಾಡಿಕೊಂಡಿರುವುದನ್ನು ಸಹಿಸದ ಮೊದಲನೇ ಪ್ರಿಯತಮೆ ವರ್ಷಾ ಸಹೋದ್ಯೋಗಿಗಳ ಮುಂದೆ ಆತನಿಗೆ ಕಪಾಳಮೋಕ್ಷ ಮಾಡಿದ್ದಳು. ಅಲ್ಲದೇ ತನ್ನೊಂದಿಗೆ ಪ್ರೀತಿಯಲ್ಲಿದ್ದಾಗ ತೆಗೆದಿದ್ದ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಸಿದ್ದಳು. ಇಷ್ಟಾದ ಬಳಿಕ ಆಕೆಯೊಂದಿಗೆ ಮಾತನಾಡಿದ್ದ ಸಂತೋಷನ ಸಹೋದರ ಆಕೆಯನ್ನು ಸಮಧಾನ ಮಾಡಿದ್ದ. ಮನೆಯವರ ಜತೆ ಮಾತನಾಡಿ ಇಬ್ಬರಿಗೂ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದ.


ಅದೇ ಸಂದರ್ಭದಲ್ಲಿ ವರ್ಷಾಗೆ ಕಂಪನಿಯಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಆಕೆ ಸಂತೋಷ್ ಹಾಗೂ ಆತನ ಹೊಸ ಪ್ರೇಯಸಿ ಕುತಂತ್ರದಿಂದ ತನಗೆ ವರ್ಗಾವಣೆ ಆಗಿದ್ದೆ ಎಂದು ಭಾವಿಸಿ ಸಂತೋಷ್‌ಗೆ ಕರೆ ಮಾಡಿ ಬೈದು ಬೆದರಿಕೆ ಹಾಕಿ ಮತ್ತೆ ಕಿರುಕುಳ ನೀಡಿದ್ದಾಳೆ. ಇದರಿಂದ ಮನನೊಂದ ಸಂತೋಷ್ ಅ.೩ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅ.೪ ರ ಬೆಳಗ್ಗೆ ೬ ಗಂಟೆಗೆ ಸಂತೋಷ್ ಮೃತಪಟ್ಟಿದ್ದಾನೆ. ಇಬ್ಬರು ಯುವತಿಯರಿಂದಾಗಿ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿರುವ ಮೃತನ ಸಹೋದರ ರಾಮಮೂರ್ತಿ ನಗರ ಠಾಣಾಗೆ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net