ಸುರಿಯುವ ಮಳೆಯಲ್ಲೇ ಸಾಗಿದ ತಿರಂಗಾ ಯಾತ್ರೆ

tiranga
ಶಿವಮೊಗ್ಗದಲ್ಲಿ ಸುರಿಯುವ ಮಳೆಯಲ್ಲೇ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಸೀನಪ್ಪ ಶೆಟ್ಟಿ ವೃತ್ತದವರೆಗೆ ಸಾಗಿ ಬಂದ ತಿರಂಗಾ ಯಾತ್ರೆ.
Published on

ಶಿವಮೊಗ್ಗ: ಕೆಲವು ದಿನಗಳ ಹಿಂದೆ ಬಿಜೆಪಿ ಜನಾಕ್ರೋಶ ಸಮಾವೇಶಕ್ಕೆ ಅಡ್ಡಿಯಾಗಿದ್ದ ವರುಣ ಮಂಗಳವಾರ ತಿರಂಗಾ ಯಾತ್ರೆಯಲ್ಲೂ ಅಬ್ಬರಿಸಿದ. ಸುರಿಯುವ ಮಳೆಯಲ್ಲೇ ಹೆಜ್ಜೆ ಹಾಕಿದ ನೂರಾರು ಮಂದಿ ಸಭಾ ಕಾರ್ಯಕ್ರಮದಲ್ಲೂ ಮಳೆಯಲ್ಲಿ ನೆನೆಯುತ್ತಲೇ ಪಾಲ್ಗೊಂಡರು. ಭಾರತದ ಸೈನ್ಯ ಹಾಗೂ ಸೈನಿಕರ ಪರವಾದ ಘೋಷಣೆಗಳು ಮುಗಿಲು ಮುಟ್ಟಿದವು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತೆ ಶೋಭಾ, ನಮ್ಮ ಯುದ್ಧ ಕೇವಲ ಆಕ್ರಮಣಕಾರರ ವಿರುದ್ಧವಲ್ಲ. ನಮ್ಮೊಳಗಿರುವ ದೇಶದ್ರೋಹಿಗಳು, ಉಗ್ರಗಾಮಿಗಳನ್ನು ದಮನ ಮಾಡಲು ಆಂತರಿಕ ಯುದ್ಧ ಮಾಡಬೇಕಿದೆ ಎಂದು ಹೇಳಿದರು.

ಮಹಿಳೆಯರು ದೇಶಕ್ಕಾಗಿ ನಾರಿ ಸೈನ್ಯದ ಚಿಂತನೆ ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಬೇಕು. ಭಾರತದ ಮಹಿಳೆ ಪಾಶ್ಚಿಮಾತ್ಯರನ್ನು ಅನುಕರಣೆ ಮಾಡದೆ, ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ನಮ್ಮಲ್ಲಿನ ಲೋಪಗಳನ್ನು ತಿದ್ದಿಕೊಂಡು ಹದಿಹರೆಯದ ಗುಂಪನ್ನು ದೇಶಕ್ಕಾಗಿ ತಯಾರು ಮಾಡುವ ಸುಸಂದರ್ಭ ತಾಯಂದಿರಿಗೆ ಒದಗಿ ಬಂದಿದೆ ಎಂದರು.

ರೆಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ವಿರೋಧಿಸಿ ಚೌಕಿದಾರ್ ಚೋರ್ ಹೈ ಎಂದವರಿಗೆ ಈಗ ಚೌಕಿದಾರನ ತಾಕತ್ತು ಗೊತ್ತಾಗಿದೆ. ಈ ಹಿಂದೆ ನಮ್ಮ ದೇಶದಲ್ಲಿ ಸಿಂಹದ ಸೈನ್ಯವಿದ್ದರೂ ನಾಯಕತ್ವ ಸಿಂಹದ್ದಾಗಿರಲಿಲ್ಲ. ಈಗ ಸಿಂಹಗಳ ಸೈನ್ಯಕ್ಕೆ ಸಿಂಹದ ನಾಯಕತ್ವವೇ ಸಿಕ್ಕಿದೆ. ಹಲವಾರು ಭಯೋತ್ಪಾದಕ ದಾಳಿಗೆ ಬಡ್ಡಿ ಸಮೇತ ತಕ್ಕ ಉತ್ತರ ನೀಡಲಾಗಿದೆ ಎಂದು ವಾಗ್ಮಿ ಪ್ರೊ. ಪುನೀತ್‌ಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net