

| ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಬಂಡೀಪುರದ ಅರಣ್ಯದೊಳಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸಮಯ ಪಾಲನೆ ಮಾಡಬೇಕಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮಾದರಿಯಲ್ಲೇ ಬಂಡೀಪುರದಲ್ಲಿ ಓಡಾಡುವ ವಾಹನಗಳ ವೇಗ ತಪಾಸಣೆ ಮಾಡಲು ‘ಸಮಯಾಧಾರಿತ ಟಿಕೆಟ್ ವ್ಯವಸ್ಥೆ’ಯನ್ನು ಜಾರಿ ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಸದ್ಯ ಮದ್ದೂರು ಚೆಕ್ಪೋಸ್ಟ್ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ.
ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರ ಅಕ್ರಮ ಓಡಾಟ ಮತ್ತು ಕುಚೇಷ್ಟೆಗಳನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯದೊಳಗೆ ಸಾಗುವಾಗ ಎದುರಾಗುವ ವನ್ಯಜೀವಿಗಳ ಫೋಟೋ ತೆಗೆಯಲು ಅನಧಿಕೃತವಾಗಿ ವಾಹನ ನಿಲ್ಲಿಸುವುದು, ವನ್ಯಜೀವಿಗಳಿಗೆ ಕೀಟಲೆ ಮಾಡುವಂತಹ ಪ್ರಕರಣಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಏನಿದು ನೂತನ ಪದ್ಧತಿ?: ಉದ್ಯಾನವನ ಪ್ರವೇಶಿಸುವ ವಾಹನಗಳಿಗೆ ಚೆಕ್ಪೋಸ್ಟ್ ಬಳಿ ಬಸ್ ಟಿಕೆಟ್ ಮಾದರಿಯಲ್ಲಿ ಒಂದು ಟಿಕೆಟ್ ನೀಡಲಾಗುತ್ತದೆ. ಅದರಲ್ಲಿ ವಾಹನ ಸಂಖ್ಯೆ ಮತ್ತು ಪ್ರವೇಶ ಸಮಯ ನಮೂದಿಸಲಾಗಿರುತ್ತೆ. ನಂತರ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಬರುವ ವಾಹನಗಳಿಗೆ ದಂಡ ವಿಧಿಸುವಿಕೆ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮದ್ದೂರು ಚೆಕ್ಪೋಸ್ಟ್ ಬಳಿಯಿಂದ ವಾಹನ ಗಂಟೆಗೆ 30 ಕಿಮೀ ವೇಗದಲ್ಲಿ ಸಂಚರಿಸಿ 40 ನಿಮಿಷಗಳಲ್ಲಿ 22 ಕಿಲೋ ಮೀಟರ್ ದೂರದಲ್ಲಿರುವ ಮೂಲೆಹೊಳೆ ಚೆಕ್ಪೋಸ್ಟ್ಗೆ ತಲುಪಬೇಕು. ಅರಣ್ಯ ಪ್ರದೇಶದೊಳಗಿನ ಹೆದ್ದಾರಿಯಲ್ಲಿ ವಾಹನಗಳ ಓಡಾಟವನ್ನು ನಿಯಂತ್ರಿಸಲು ಮತ್ತು ಚಾಲಕರ ಅಜಾಗರೂಕತೆಯಿಂದ ವನ್ಯಜೀವಿಗಳು ವಾಹನಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಈ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಲ್ಲ ಚೆಕ್ಪೋಸ್ಟ್ಗಳಲ್ಲಿ ಈಗಾಗಲೇ ಈ ನೂತನ ಪದ್ಧತಿ ಜಾರಿಯಲ್ಲಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ಚೆಕ್ಪೋಸ್ಟ್ನಲ್ಲಿ ಪ್ರಾಯೋಗಿಕವಾಗಿ ಟಿಕೆಟ್ ವಿತರಣಾ ಕಾರ್ಯ ಆರಂಭಿಸಲಾಗಿದೆ. ಶನಿವಾರ ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರು ಚೆಕ್ಪೋಸ್ಟ್ನಲ್ಲಿ ಅರ್ಎಫ್ಒ ಸುಧಾಕರ್ ಟಿಕೆಟ್ ವಿತರಣೆಗೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲ ಚೆಕ್ಪೋಸ್ಟ್ಗಳಲ್ಲೂ ಈ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆಸಲಾಗಿದೆ.
ಹೆಚ್ಚುತ್ತಿರುವ ಆನೆ ದಾಳಿ ಪ್ರಕರಣ: ಇತ್ತೀಚೆಗೆ ಬಂಡೀಪುರದಿಂದ ಮಧುಮಲೈ ಹಾಗೂ ಮಂಗಲ ಕಡೆಗೆ ಹೋಗುವ ವಾಹನಗಳ ಮೇಲೆ ಆನೆ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಗಸ್ತು ನಡೆಸುತ್ತಿದ್ದು, ಅನಧಿಕೃತವಾಗಿ ವಾಹನ ನಿಲ್ಲಿಸುವವರಿಗೆ ದಂಡ ವಿಧಿಸುತ್ತಿದೆ. ಸದ್ಯ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆ, ಬೆಂಕಿಪೊಟ್ಟಣ ಹಾಗೂ ಲೈಟರ್ಗಳಂತಹ ವಸ್ತುಗಳ ಜಪ್ತಿ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಅರಣ್ಯ ಪ್ರದೇಶದೊಳಗೆ ಅನಧಿಕೃತವಾಗಿ ವಾಹನ ನಿಲುಗಡೆ ತಪ್ಪಿಸಲು ಪ್ರಾಯೋಗಿಕವಾಗಿ ಮದ್ದೂರು ಚೆಕ್ ಪೋಸ್ಟ್ನಲ್ಲಿ ಟಿಕೆಟ್ ವಿತರಣೆ ಮಾಡುತ್ತಿದ್ದು, ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗಿದೆ. ಸದ್ಯದಲ್ಲೇ ಉಳಿದ ಚೆಕ್ಪೋಸ್ಟ್ಗಳಲ್ಲೂ ಟಿಕೆಟ್ ವಿತರಣೆ ಆರಂಭಿಸಲಾಗುವುದು.
| ನಟೇಶ್ ಹುಲಿ ಯೋಜನೆ ನಿರ್ದೇಶಕ, ಬಂಡೀಪುರ