ವಿವಿಧ ಯೋಜನೆಗಳಡಿ 36,659 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು

MONEY
Published on

ನವದೆಹಲಿ: ಕೋವಿಡ್​ 19 ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಬಡವರಿಗಾಗಿ ವಿವಿಧ ಯೋಜನೆಗಳಡಿ ಇದುವರೆಗೆ 36,659 ಕೋಟಿ ರೂ. ನಗದನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ....!

ಅಂದರೆ, ಇಷ್ಟೊಂದು ಮೊತ್ತದ ಹಣವನ್ನು 16.01 ಕೋಟಿ ಫಲಾನುಭವಿಗಳ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಯೋಜನೆಗಳು/ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಡಿ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ವೆಚ್ಚ ಇಲಾಖೆಯ ಕಂಟ್ರೋಲರ್​ ಜನರಲ್​ ಆಫ್​ ಅಕೌಂಟ್ಸ್​ ಕಚೇರಿ (ಸಿಜಿಎ) ಮಾಹಿತಿ ನೀಡಿದೆ.

ಇದರ ಪ್ರಕಾರ ಸಿಎಸ್​/ಸಿಎಸ್​ಎಸ್​ ಅಡಿ 27,442 ಕೋಟಿ ರೂ. ಹಾಗೂ ರಾಜ್ಯ ಸರ್ಕಾರಗಳಿಂದ 9,717 ಕೋಟಿ ರೂ. ನಗದನ್ನು 16.01 ಕೋಟಿ ಫಲಾನುಭವಿಗಳ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಈ 16.01 ಕೋಟಿ ಫಲಾನುಭವಿಗಳ ಪೈಕಿ 11.42 ಕೋಟಿ ಜನರು ಸಿಎಸ್/ಸಿಎಸ್​ಎಸ್​ ಫಲಾನುಭವಿಗಳಾಗಿದ್ದರೆ, ಇನ್ನುಳಿದ 4.59 ಕೋಟಿ ಫಲಾನುಭವಿಗಳು ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಘೋಷಿಸಿದ್ದಂತೆ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಯಡಿ ಎಲ್ಲ ಫಲಾನುಭವಿಗಳ ಜನಧನ ಖಾತೆಗೆ ತಲಾ 500 ರೂ.ಗಳನ್ನು ವರ್ಗಾವಣೆ ಮಾಡಲಾಗಿತ್ತು. ಈ ಯೋಜನೆಯ ಭಾಗವಾಗಿ 19.86 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಒಟ್ಟು 9,930 ಕೋಟಿ ರೂ. ನಗದನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net