

ಮಡಿಕೇರಿ: ದಕ್ಷಿಣ ಕೊಡಗಿನ ಜನರನ್ನು ಕಾಡುತ್ತಿರುವ ನರಹಂತಕ ಹುಲಿ ಸೆರೆ ಕಾರ್ಯಾಚರಣೆ ವೈಖರಿ ಬದಲಾಯಿಸಲು ಅರಣ್ಯ ಇಲಾಖಾಧಿಕಾರಿಗಳು ತೀರ್ಮಾನಿಸಿದ್ದಾರೆ. ಕಳೆದ ಹನ್ನೆರಡು ದಿನದಿಂದ ತಾತ್ಕಾಲಿಕ ಶಿಬಿರ ಆಯೋಜಿಸಿ, ಹುಲಿ ಸೆರೆಗೆ ನಡೆಯುತ್ತಿರುವ ಕೂಂಬಿಂಗ್ ಪರಿಣಾಮಕಾರಿಯಾಗಿಲ್ಲದ್ದ ಹಿನ್ನೆಲೆಯಲ್ಲಿ ಸೆರೆ ಕಾರ್ಯಾಚರಣೆ ಬದಲಾಯಿಸಲು ನಿರ್ಧರಿಸಲಾಗಿದೆ.
ಅಧಿಕಾರಿ, ಸಿಬ್ಬಂದಿ ಸೇರಿದ್ದಂತೆ 150 ಜನ ಕಾರ್ಯಾಚರಣೆ ನಡೆಸುತ್ತಿದ್ದರೂ, ಹುಲಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ, ಜಾನುವಾರು ಮೇಲೆ ನಿರಂತರ ಹುಲಿ ದಾಳಿ ನಡೆಯುತ್ತಿದೆ. ಗುರುವಾರ ಹರಿಹಾರ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರ ಬಲಿಯಾಗಿದೆ. ನಾಲ್ಕು ಸಾಕಾನೆ, ಶಾರ್ಪ್ ಶೂಟರ್, ಅಗತ್ಯ ಅಧಿಕಾರಿ, ಸಿಬ್ಬಂದಿ ಬಳಸಿಕೊಂಡು ಸೆರೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
ಅಟ್ಟಣಿ ಮೇಲಿಂದ ಅರವಳಿಕೆ ಚುಚ್ಚುಮದ್ದು ಹಾಕುವುದರ ಮೂಲಕ ಹುಲಿ ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿದೆ. ಕೊಂದ ಜಾನುವಾರ ಕಳೆಬರ ತಿನ್ನಲು ಹುಲಿ ಆಗಮಿಸುವ ಹಿನ್ನೆಲೆಯಲ್ಲಿ ಮರದ ಮೇಲಿಂದ ಶಾರ್ಫ್ ಶೂಟರ್ ಮೂಲಕ ಅರವಳಿಕೆ ಮಚ್ಚು ಸಿಡಿಸಲು ಉದ್ದೇಶಿಸಲಾಗಿದೆ. ಹನ್ನೆರಡು ದಿನದಿಂದ ನಡೆಯುತ್ತಿರುವ ಕಾರ್ಯಾಚರಣೆ ಫಲಪ್ರದವಾಗಿಲ್ಲ ಎಂಬ ಟೀಕೆ ಜನವಲಯದಿಂದ ವ್ಯಕ್ತವಾಗಿದೆ.
ಹುಲಿ ದಾಳಿಗೆ ಇಬ್ಬರು ಜೀವ ಕಳೆದುಕೊಂಡಿದ್ದು, ಹಲವು ಜಾನುವಾರು ಬಲಿಯಾಗಿದೆ. ನರಹಂತಕ ಹುಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಗಮಿಸಿರುವುದು ದೃಢಪಟ್ಟಿದೆ. 2013 ರಲ್ಲಿ ಸರ್ವೇ ವೇಳೆ ಕಲ್ಲಳ್ಳ ವಲಯದಲ್ಲಿ ಪತ್ತೆಯಾದ ಹುಲಿ, ದಕ್ಷಿಣ ಕೊಡಗಿನ ಗ್ರಾಮದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಳವಡಿಸಲು ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ಹುಲಿ ಹಾಗೂ 2013ರ ಸಮೀಕ್ಷೆಯಲ್ಲಿ ಪತ್ತೆಯಾದ ಹುಲಿ ಒಂದೇ ಆಗಿದೆ. ಈ ಹುಲಿಗೆ ಅಂದಾಜು 11 ವರ್ಷ ಪ್ರಾಯವಾಗಿದ್ದು, ಗಂಡು ಹುಲಿಯಾಗಿದೆ.