ಹನಗೋಡಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ

20han2
ಹನಗೋಡು ಬಳಿಯ ತೋಟದಲ್ಲಿ ಹುಲಿ ಹೆಜ್ಜೆಯನ್ನು ಪರಿಶೀಲಿಸಿದ ಆರ್. ಎಫ್.ಒ.ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ.
Published on

ಹನಗೋಡು: ಹನಗೋಡಿನಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಹನಗೋಡು-ಹುಣಸೂರು ಮುಖ್ಯರಸ್ತೆಯ ಹನಗೋಡಿನ ಅಣ್ಣೆಗೆರೆ ಕೆರೆ ಕಡೆಯಿಂದ ಸೋಮಪ್ಪ ಅವರ ತೋಟದ ಮೂಲಕ ಹಾದು ಕುಂಟೇರಿ ಕೆರೆ ಕಡೆಗೆ ಹುಲಿ ಹೋಗಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಮಂಗಳವಾರ ಆಗಮಿಸಿದ ವನ್ಯಜೀವಿ ವಲಯದ ಹುಣಸೂರು ಆರ್‌ಎಫ್‌ಒ ಸುಬ್ರಹ್ಮಣ್ಯ ನೇತೃತ್ವದ ತಂಡ ಪರಿಶೀಲಿಸಿ, ಇದು ಹುಲಿ ಹೆಜ್ಜೆ ಎಂದು ಖಾತ್ರಿಪಡಿಸಿದೆ.

ಈ ವೇಳೆ ಗ್ರಾಮಸ್ಥರು ಈ ಭಾಗದ ಜಮೀನು ಹಾಗೂ ಹಳ್ಳಿಗಳ ಹಲವೆಡೆ ಹುಲಿ ಹೆಜ್ಜೆ ಕಳೆದ ವರ್ಷದಿಂದಲೂ ಕಾಣಿಸಿಕೊಳ್ಳುತ್ತಿದ್ದು, ಶೀಘ್ರ ಸೆರೆ ಹಿಡಿಯಬೇಕೆಂದು ಮನವಿ ಮಾಡಿದರು.

ಒಂಟಿಯಾಗಿ ಓಡಾಡಬೇಡಿ: ಬೀರತಮ್ನನಹಳ್ಳಿ ಮೀಸಲು ಅರಣ್ಯದ ಬಿ.ಆರ್. ಕಾವಲ್ ಕಡೆಯಿಂದ ಹುಲಿ ಸಂಚರಿಸಿರುವ ಹೆಜ್ಜೆ ಪತ್ತೆಯಾಗಿರುವುದರಿಂದ ಹುಣಸೂರು ಮತ್ತು ವೀರನಹೊಸಹಳ್ಳಿ ವಲಯದ ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ.

ಹುಲಿ ಹೆಜ್ಜೆ ಪತ್ತೆಯಾಗಿರುವುದರಿಂದ ಈ ಭಾಗದಲ್ಲಿ ಒಂಟಿಯಾಗಿ ತಿರುಗಾಡಬೇಡಿ. ಜಮೀನು ಕೆಲಸಕ್ಕೆ ಹೋಗಬೇಕಾದಲ್ಲಿ ಜತೆಯಲ್ಲೇ ಹೋಗಿ ಎಂದು ಪ್ರಚಾರ ಮಾಡಲಾಗಿದೆ ಎಂದು ಆರ್‌ಎಫ್‌ಒ. ಸುಬ್ರಹ್ಮಣ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net