ಗುಂಡ್ರೆಯಲ್ಲಿ ಹೆಣ್ಣು ಹುಲಿ ಸಾವು

28-JUNE-GPT-3
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದಲ್ಲಿ ಸಾವಿಗೀಡಾದ ಹುಲಿಯ ಕಳೇಬರವನ್ನು ಸುಟ್ಟುಹಾಕಲಾಯಿತು. ಎಸ್.ಪ್ರಭಾಕರನ್, ಮಂಜುನಾಥ ಬಾಗೇವಾಡಿ, ರಘುರಾಂ, ಅಭಿಲಾಷ್, ಡಾ.ಬಿ.ಬಿ.ಪ್ರಸನ್ನ, ಬಿ.ಬಿ.ಅಮೃತೇಶ್ ಇದ್ದರು.
Published on

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದಲ್ಲಿ ಹೆಣ್ಣು ಹುಲಿಯೊಂದು ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.

ವಲಯದ ಬಾಣೂರು ಶಾಖೆಯ ಹಂಗೈತೋಡು ಗಸ್ತಿನ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಿಬ್ಬಂದಿ ಗಸ್ತು ಮಾಡುವಾಗ ಹುಲಿ ಕಳೇಬರ ಪತ್ತೆಯಾಗಿದೆ. ವಿಷಯ ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಕಳೇಬರವನ್ನು ಪರಿಶೀಲಿಸಿದರು. ಕಾದಾಟದಲ್ಲಿ ಗಾಯಗೊಂಡಿದ್ದ 4-5 ವರ್ಷ ವಯಸ್ಸಿನ ಹೆಣ್ಣುಹುಲಿ ಕೆಲವು ದಿನಗಳ ಹಿಂದೆ ಸತ್ತಿದ್ದರಿಂದ ಕಳೇಬರ ಕೊಳೆಯಲಾರಂಭಿಸಿತ್ತು. ಎಲ್ಲ ಉಗುರು ಮತ್ತು ಹಲ್ಲುಗಳು ಸುರಕ್ಷಿತವಾಗಿದ್ದು ಎರಡು ಮುಂಗಾಲು, ಅದರ ಪಂಜದಲ್ಲಿ ಎರಡು ಉಗುರುಗಳು ಹಾಗೂ ಹಿಂಗಾಲಿನ ಎರಡು ಪಾದಗಳಲ್ಲಿ ನಾಲ್ಕು ಉಗುರುಗಳು ಮುರಿದು ಗಂಭೀರ ಗಾಯದ ಗುರುತು ಕಂಡು ಬಂದಿದ್ದರಿಂದ, ಹುಲಿಗಳು ಕಾಳಗದಿಂದ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿ ಬೇಟೆಯಾಡಲಾಗದೆ ಹಸಿವಿನಿಂದ ಬಳಲಿ ಮೃತ ಪಟ್ಟಿರಬಹುದು ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಾಹ್ನ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್, ಎನ್.ಬೇಗೂರು ವಲಯಾರಣ್ಯಾಧಿಕಾರಿ ಮಂಜುನಾಥ ಬಾಗೇವಾಡಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಮಂಡಳಿ ಪ್ರತಿನಿಧಿ ರಘುರಾಂ, ಗ್ರಾಮ ಪಂಚಾಯಿತಿ ಸದಸ್ಯ ಅಭಿಲಾಷ್ ಇನ್ನಿತರ ಸಮ್ಮುಖದಲ್ಲಿ ಪಶುವೈದ್ಯ ಡಾ.ಬಿ.ಬಿ.ಪ್ರಸನ್ನ ಅವರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಸುಟ್ಟುಹಾಕಲಾಯಿತು ಎಂದು ಗುಂಡ್ರೆ ವಲಯ ಅರಣ್ಯಾಧಿಕಾರಿ ಬಿ.ಬಿ.ಅಮೃತೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net