

ರಾಯ್ಪುರ: ಸಫಾರಿಗೆ ಹೋಗಿದ್ದ ಪ್ರವಾಸಿಗರ ಬಸ್ನ್ನು ಹುಲಿಯೊಂದು ಅಟ್ಟಿಸಿಕೊಂಡು ಬಂದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಛತ್ತೀಸ್ಗಢದ ನಂದನವನ ಕಾಡಿನಲ್ಲಿ ಒಂದಷ್ಟು ಜನ ಪ್ರವಾಸಿಗರು ಸಫಾರಿಗೆ ಹೋಗಿದ್ದರು. ಈ ಸಫಾರಿ ಬಸ್ ಅರಣ್ಯದೊಳಕ್ಕೆ ಹೋದ ಸಂದರ್ಭದಲ್ಲಿ ಎರಡು ಹುಲಿಗಳು ಕಾಳಗದಲ್ಲಿ ತೊಡಗಿದ್ದವು.
ಬಸ್ ನಿಧಾನಕ್ಕೆ ಹೋಗುತ್ತಿತ್ತು. ಆದರೆ ಕಾಳಗದಲ್ಲಿ ತೊಡಗಿದ್ದ ಎರಡು ಹುಲಿಗಳಲ್ಲಿ ಒಂದು ಆಕಸ್ಮಿಕವಾಗಿ ಬಸ್ನತ್ತ ತಿರುಗಿತ್ತು. ಬಸ್ನ ಕಿಟಕಿ ಮೇಲೆ ದಾಳಿ ಮಾಡಿತು. ಬೆದರಿದ ಪ್ರವಾಸಿಗರು ಚಾಲಕನ ಬಳಿ ವಾಹನವನ್ನು ವೇಗವಾಗಿ ಚಾಲನೆ ಮಾಡುವಂತೆ ಹೇಳಿದರು. ಅವರ ಮಾತನ್ನು ಕೇಳಿದ ಡ್ರೈವರ್ ಬಸ್ನ ವೇಗ ಹೆಚ್ಚು ಮಾಡಿದ. ಆದರೆ ಹುಲಿ ಮಾತ್ರ ಸುಮ್ಮನಿರದೆ ಬಸ್ನ್ನು ಅಟ್ಟಿಸಿಕೊಂಡು ಹೋಯಿತು.
ಆದರೆ ಈ ವಿಡಿಯೋ ಬಳಿಕ ಸಿಕ್ಕಾಪಟೆ ವೈರಲ್ ಆಯಿತು. ವೈರಲ್ ಆಗುತ್ತಿದ್ದಂತೆ ಆ ಉದ್ಯಾನವನದ ಇಬ್ಬರು ಅಧಿಕಾರಿಗಳ ಕೆಲಸವೂ ಹೋಗಿದೆ.
ಸಫಾರಿಗೆ ಹೋದ ವಾಹನವನ್ನು ಕಾಡಿನಲ್ಲಿ ವೇಗವಾಗಿ ಓಡಿಸಬಾರದು ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿದ ಬಸ್ನ ಚಾಲಕ ಹಾಗೂ ಪ್ರವಾಸಿ ಮಾರ್ಗದರ್ಶಕನನ್ನು ವಜಾಗೊಳಿಸಿದ್ದಾಗಿ ನಂದನವನ ಜಂಗಲ್ ಸಫಾರಿಯ ನಿರ್ದೇಶಕರು ತಿಳಿಸಿದ್ದಾರೆ.
ಈ ವಿಡಿಯೋವನ್ನು ಟೂರಿಸ್ಟ್ ಗೈಡ್ ಚಿತ್ರೀಕರಿಸಿದ್ದಾಗಿ ಗೊತ್ತಾಗಿದೆ. ಚಾಲಕರು ಹಾಗೂ ಗೈಡ್ಗಳಿಗೆ ಪ್ರಾಣಿಗಳ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ನಾವು ತರಬೇತಿ ನೀಡಿರುತ್ತೇವೆ. ಅವರು ವಾಹನದ ವೇಗ ಹೆಚ್ಚಿಸುವ ಬದಲು ಸ್ವಲ್ಪ ಹೊತ್ತು ಸುಮ್ಮನೆ ಇರಬಹುದಿತ್ತು. ಹುಲಿ ಅದರ ಪಾಡಿಗೆ ಹೋಗುತ್ತಿತ್ತು ಎಂದು ಹೇಳಿದ್ದಾರೆ.
ಪ್ರವಾಸಿ ವಾಹನದ ಉಸ್ತುವಾರಿಯಾಗಿರುವ ಅರಣ್ಯ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದೂ ಹೇಳಿದ್ದಾರೆ.(ಏಜೆನ್ಸೀಸ್)