

ನ್ಯೂಯಾರ್ಕ್: ಅಮೆರಿಕದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದ್ದು, ನ್ಯೂಯಾರ್ಕ್ನ ಮೃಗಾಲಯದಲ್ಲಿರುವ ನಾಲ್ಕು ವರ್ಷದ ಒಂದು ಹೆಣ್ಣು ಹುಲಿ ಕೆಮ್ಮುತ್ತಿರುವುದು ನೋಡಿ ಪರೀಕ್ಷೆಗೊಳಪಡಿಸಿದಾಗ ಅದಕ್ಕೂ COVID19 ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರ ಜತೆಗೆ ಇದ್ದ ಇತರೆ ಹುಲಿಗಳಿಗೂ ಸೋಂಕು ತಗುಲಿದೆ!
ನ್ಯೂಯಾರ್ಕ್ನ ಬ್ರೋನ್ಕ್ಸ್ ಝೂನಲ್ಲಿ ಇರುವ ಮಲಯನ್ ಹುಲಿ ಇದಾಗಿದ್ದು, ಇದಕ್ಕೆ ಮೃಗಾಲಯದ ಉದ್ಯೋಗಿ ಒಬ್ಬರಿಂದ ಸೋಂಕು ಹರಡಿದೆ. ಮಾರ್ಚ್ 16ರಿಂದ ಈ ಮೃಗಾಲಯದ ಬಾಗಿಲು ಸಾರ್ವಜನಿಕರಿಗೆ ಮುಚ್ಚಿದೆ. ಮಲಯನ್ ಹುಲಿಯ ಹೆಸರು ನಾದಿಯಾ. ಅದು ಮತ್ತು ಅದರ ಜತೆ ಇರುವ ಇತರೆ ಐದು ಹುಲಿ ಮತ್ತು ಸಿಂಹಗಳಿಗೆ ಈಗ ಉಸಿರಾಟದ ತೊಂದರೆ ಕಾಣಿಸಿದೆ.
ನಾದಿಯಾ ಜತೆಗೆ ಆಕೆಯ ಸಹೋದರಿ ಆಜುಲ್, ಎರಡು ಅಮೂರ್ ಹುಲಿಗಳು ಮತ್ತು ಮೂರು ಆಫ್ರಿಕನ್ ಸಿಂಹಗಳಲ್ಲಿ ಒಣಕೆಮ್ಮು ಕಾಣಿಸಿವೆ. ಆದಾಗ್ಯೂ ಇವೆಲ್ಲವೂ ಚೇತರಿಸುವ ನಿರೀಕ್ಷೆ ಇದೆ. ಬೇರೆ ಯಾವುದೇ ಪ್ರಾಣಿಗಳಲ್ಲೂ ಈ ರೀತಿ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಮೃಗಾಲಯದ ಅಧಿಕೃತರು ಹೇಳಿದ್ದಾರೆ.
ಈ ಪ್ರಾಣಿಗಳಲ್ಲಿ ಹಸಿವು ಕಡಿಮೆ ಆಗಿದ್ದು, ಉಳಿದಂತೆ ಎಲ್ಲ ರೀತಿಯ ಚಿಕಿತ್ಸೆಗಳು ಮುಂದುವರಿದಿವೆ. ಎಲ್ಲದಕ್ಕೂ ಅವುಗಳು ಸ್ಪಂದಿಸುತ್ತಿವೆ. ಆದಾಗ್ಯೂ, ಈ ಸೋಂಕು ಪ್ರಾಣಿಗಳಲ್ಲಿ ಹೇಗೆ ಹರಡಿತು ಎಂಬುದು ವೇದ್ಯವಾಗಿಲ್ಲ. ಪ್ರತಿಯೊಂದು ಅಂಶವನ್ನೂ ಪರಿಶೀಲಿಸುತ್ತಿದ್ದು, ಸೋಂಕು ಹರಡುವಿಕೆಗೆ ಕಾರಣ ಪತ್ತೆ ಹಚ್ಚಲಾಗುವುದು ಎಂದು ಮೃಗಾಲಯದ ಅಧಿಕೃತರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)