

ಅಸ್ಸಾಂ: ಹುಲಿ ಎಂದರೆ ಸಾಮಾನ್ಯವಾಗಿ ಎಲ್ಲಾ ಪ್ರಾಣಿಗಳೂ ಭಯ ಬೀಳುತ್ತವೆ. ಆದರೆ ಇಲ್ಲೊಂದು ಗಿಬ್ಬನ್ (ಚಿಂಪಾಂಜಿ ಜಾತಿಗೆ ಸೇರಿದ್ದು), ಹುಲಿಯನ್ನೇ ಯಾಮಾರಿಸಿದೆ!
ಎರಡು ಹುಲಿಗಳನ್ನು ಕಾಡಿ, ಕೆಣಕಿದ ಈ ಗಿಬ್ಬನ್, ಹುಲಿಗಳನ್ನೇ ಸುಸ್ತು ಮಾಡಿದೆ. ಅವುಗಳನ್ನು ಛೇಡಿಸಿದ ಕಾರಣ ಸಿಟ್ಟಿಗೆದ್ದ ಹುಲಿಗಳು ಅದನ್ನು ಹಿಡಿಯಲು ಹೋದಾಗ ಮರದಿಂದ ಮರಕ್ಕೆ ಹಾರಿ ತಪ್ಪಿಸಿಕೊಂಡು ಹುಲಿಗಳನ್ನು ಬೇಸ್ತು ಬೀಳಸಿದೆ.
ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಅಸ್ಸಾಂನಲ್ಲಿ ಕಂಡುಬಂದಿರುವ ಈ ದೃಶ್ಯವನ್ನು ಇವರು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.
ಕೇವಲ 54 ಸೆಕೆಂಡ್‌ಗಳ ಈ ವಿಡಿಯೋ ನೋಡಿ ನಕ್ಕು ನಕ್ಕೂ ಸುಸ್ತಾಗುವಂತಿದೆ. ಗಿಬ್ಬನ್ ಮರದ ಮೇಲಿದ್ದು, ಹುಲಿಗಳು ಕೆಳಗೆ ಇವೆ. ಗಿಬ್ಬನ್, ಮರದ ಕೊಂಬೆಗಳನ್ನು ಹಿಡಿದು ಕೆಳಗೆ ಜೋತಾಡಿ ಹುಲಿಗಳ ತಲೆಗೆ ಹೊಡೆಯುತ್ತದೆ. ಅನೇಕ ಬಾರಿ ಈ ರೀತಿ ಮಾಡಿ ಹುಲಿಗಳನ್ನು ಕೆಣಕಿದೆ. ಆದರೆ ಹುಲಿಗಳು ಎಷ್ಟೇ ಹಿಡಿಯಲು ಹೋದರೂ ಅದು ಕೈಗೆ ಸಿಕ್ಕಿಲ್ಲ.
ಜುಲೈ 5ರಂದು ಅಪ್ಲೋಡ್ ಮಾಡಿದ ಈ ವಿಡಿಯೋಗೆ ಭಾರಿ ಮೆಚ್ಚುಗೆ ಕಳಿಸಿದೆ. 10 ಸಾವಿರಕ್ಕೂ ಅಧಿಕ ಮಂದಿ ಇದರ ವೀಕ್ಷಣೆ ಮಾಡಿದ್ದರೆ, ನೂರಾರು ಕಮೆಂಟ್ ಗಳು ಬಂದಿವೆ.