ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳ ಸಾವು, ಬಲಿ ಪಡೆದುಕೊಂಡ ಟ್ರ್ಯಾಕ್ಟರ್

A519B5E8-DF37-4042-8218-DBCC29CB662D-23.jpeg
Published on

ಚಿಕ್ಕಬಳ್ಳಾಪುರ: ತಾಲೂಕಿನ ಗೇರ್ ಹಳ್ಳಿ ಗೇಟ್ ಸಮೀಪ ಬುಧವಾರ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ನಗರದ ಬಿಜಿಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನಿತೀನ್ ( 17), ನಿತೀಶ್ ಗೌಡ (17) ಮತ್ತು ಗುಡ್ ಶೆಫರ್ಡ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ವೈಭವ್ (16) ಮೃತರು. ಮೂವರು ಅಗಲಗುರ್ಕಿ ಗ್ರಾಮದವರು.

*ಪ್ರಕರಣದ ಹಿನ್ನೆಲೆ*
ಆವಲಗುರ್ಕಿಯ ಮೂವರು ವಿದ್ಯಾರ್ಥಿಗಳು ಶಾಲಾ ಕಾಲೇಜಿನ ತರಗತಿಯ ಪಾಠ ಪ್ರವಚನಗಳನ್ನು ಮುಗಿಸಿಕೊಂಡ ಬಳಿಕ ಸಂಜೆ ಗ್ರಾಮದಲ್ಲಿನ ಶಿಕ್ಷಕರ ಬಳಿ ಟ್ಯೂಷನ್ ಗೆ ಹೋಗಿದ್ದಾರೆ. ಇದು ಮುಗಿದು ಮತ್ತೆ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ರಸ್ತೆಯ ಬದಿಯಲ್ಲಿ ಜೆಸಿಬಿ ವಾಹನದ ಟೈರನ್ನು ಸಾಗಿಸಲು ಟ್ರ್ಯಾಕರ್ ನಿಂತಿತ್ತು. ಇದೇ ವೇಳೆ ಕತ್ತಲಿನಲ್ಲಿ ದ್ವಿಚಕ್ರ ವಾಹನವು ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲಿಯೇ ಇಬ್ಬರು, ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಜಿಲ್ಲಾಸ್ಪತ್ರೆಗೆ ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

*ಗ್ರಾಮದಲ್ಲಿ ನೀರವ ಮೌನ*
ಮೂವರನ್ನು ಬಲಿ ಪಡೆದುಕೊಂಡ ಅಪಘಾತದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಮೃತರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net