

ಬೆಂಗಳೂರು: ಸಾಲ ತೀರಿಸಲು ಎಟಿಎಂಗೆ ನುಗ್ಗಿ ದರೋಡೆ ಮಾಡಿದ ಇಬ್ಬರು ಮಾಜಿ ಉದ್ಯೋಗಿ ಸೇರಿ ಒಟ್ಟು ಮೂವರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ರೂ.ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶ ಅನಂತಪುರ ಜಿಲ್ಲೆಯವರಾದ ಮುರುಳಿ, ವೆಂಕಟೇಶ್ ಹಾಗೂ ಸಾಯಿತೇಜ ಬಂಧಿತರು. ಬಂಧಿತರೆಲ್ಲರೂ ಸ್ನೇಹಿತರಾಗಿದ್ದು ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ಬಡಾವಣೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗೆ ಮೇ ೩೦ ರಂದು ೨೨ ಲಕ್ಷ ರೂ. ತುಂಬಿಸಲಾಗಿತ್ತು. ಆದರೆ ಮೇ ೩೧ರ ತಡರಾತ್ರಿ ೨೦.೧೨ ಲಕ್ಷ ರೂ. ಕಳ್ಳತನವಾಗಿತ್ತು. ತಕ್ಷಣ ಮುಂಬೈನಲ್ಲಿರುವ ಕಂಟ್ರೋಲ್ ರೂಂ ಗೆ ಸಂದೇಶ ಹೋಗಿತ್ತು. ಕಂಟ್ರೋಲ್ ರೂಂ ಅವರು ಅಲರ್ಟ್ ಮಾಡಿದ್ದಾಗ ಪೊಲೀಸರು ಬಂದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಪರಿಚಿತನೊಬ್ಬ ಎಟಿಎಂಗೆ ಬಂದು ಪಾಸ್ ವರ್ಡ್ ಬಳಸಿ ಹಣ ಕದ್ದಿರುವುದು ಗೊತ್ತಾಗಿತ್ತು. ಹಣ ತುಂಬಿಸುವ ಸಿಬ್ಬಂದಿ ಅಥವಾ ಮಾಜಿ ಸಿಬ್ಬಂದಿಯೆ ಈ ಹಣ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸೆಕ್ಯೂರ್ ವ್ಯಾಲಿ ಇಂಡೇನ್ ಏಜೆನ್ಸಿಯ ನೌಕರರೇ ಭಾಗಿಯಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ಬ್ಯಾಂಕ್‌ನ ಮ್ಯಾನೇಜರ್ ಪೊಲೀಸರಿಗೆ ದೂರಿದ್ದರು.
ಹಣ ಕಳ್ಳತನ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಪೊಲೀಸರು ಸೆಕ್ಯೂರ್ ವ್ಯಾಲಿ ಏಜೆನ್ಸಿಯಲ್ಲಿ ಕೆಲಸ ತೊರೆದಿದ್ದ ನೌಕರರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅನುಮಾನಸ್ಪಾದ ನೌಕರರ ಪಟ್ಟಿ ಸಿದ್ದಪಡಿಸಿಕೊಂಡು ತಾಂತ್ರಿಕವಾಗಿ ತನಿಖೆ ನಡೆಸಿದಾಗ ಮಾಜಿ ಸಿಬ್ಬಂದಿ ಮುರುಳಿ ಹಾಗೂ ವೆಂಕಟೇಶ್ ಎಂಬುವರ ಮೇಲೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ್ದಾಗ ನಗರದಿಂದ ಆಂಧ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ತೀರಿಸಲು ಕೃತ್ಯ:
ಏಜೆನ್ಸಿಯಲ್ಲಿ ಮುರುಳಿ ಹಾಗೂ ವೆಂಕಟೇಶ್ ಕಸ್ಟೋಡಿಯನ್ ಆಗಿ ಎರಡು ವರ್ಷ ಕೆಲಸ ಮಾಡುತ್ತಿದ್ದರು. ಕರೊನಾ ವೇಳೆ ಕೆಲಸ ತೊರೆದು ಅನಂತಪುರದಲ್ಲಿದ್ದರು. ಇತ್ತೀಚೆಗೆ ಮುರುಳಿಗೆ ವಿವಾಹವಾಗಿದ್ದು ಲಕ್ಷಾಂತರ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಹೆಣಗಾಡುತ್ತಿದ್ದ. ಅಕ್ರಮವಾಗಿ ಹಣ ಸಂಪಾದನೆ ಮಾಡಲು ನಿರ್ಧರಿಸಿದ ಮುರುಳಿ ಸಹಚರ ವೆಂಕಟೇಶ್‌ನೊಂದಿಗೆ ಈ ಬಗ್ಗೆ ಚರ್ಚಿಸಿದ್ದ. ಇದಕ್ಕೆ ಪ್ರತಿಯಾಗಿ ೬ ಲಕ್ಷ ರೂ. ನೀಡುವಂತೆ ವೆಂಕಟೇಶ್ ಇಟ್ಟ ಬೇಡಿಕೆಗೆ ಮುರುಳಿ ಕೂಡ ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಸ್ ವರ್ಡ್ ಬದಲಾವಣೆ ಮಾಡಿರಲಿಲ್ಲ:
ಕಸ್ಟೋಡಿಯನ್ ಆದವರಿಗೆ ಅಧಿಕೃತವಾಗಿ ಬ್ಯಾಂಕ್‌ನಿಂದ ಇಬ್ಬರಿಗೆ ಪಾಸ್ ವರ್ಡ್‌ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಬಂಧಿತ ಇಬ್ಬರೂ ಪಾಸ್ ವರ್ಡ್ ಹೊಂದಿದ್ದರು. ಕೆಲಸ ತೊರೆದು ಹಲವು ವರ್ಷ ಕಳೆದರೂ ಎಟಿಎಂ ಯಂತ್ರದ ಪಾಸ್ ವರ್ಡ್ ಬದಲಾವಣೆ ಮಾಡಿರಲಿಲ್ಲ. ಇದನ್ನು ಅರಿತ ಮುರುಳಿ, ವೆಂಕಟೇಶ್ ಜತೆ ಡೀಲ್ ಕುದುರಿಸಿಕೊಂಡು ಆತನ ಬಳಿ ಇದ್ದ ಪಾಸ್ ವರ್ಡ್ ಪಡೆದುಕೊಂಡಿದ್ದ. ಅನುಮಾನಬಾರದಿರಲು ಮತ್ತೊಬ್ಬ ಸ್ನೇಹಿತ ಸಾಯಿತೇಜನನ್ನು ಎಟಿಎಂ ಕೇಂದ್ರಕ್ಕೆ ಕಳುಹಿಸಿ ಹಣ ದರೋಡೆ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.